ಬೆಂಗಳೂರು: ನಗರದ ಹಳೇ ಮದ್ರಾಸ್ ರಸ್ತೆಯಲ್ಲಿ ಬುಧವಾರ ಉದ್ಘಾಟನೆಯಾದ ಡಾ.ಎಪಿಜೆ ಅಬ್ದುಲ್ ಕಲಾಂ ವಿಷನ್ 2020 ಡಿಜಿಟಲ್ ಬಸ್ ನಿಲ್ದಾಣವನ್ನು ತೆರವುಗೊಳಿಸಲು ಮುಂದಾದ ಬಿಬಿಎಂಪಿ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ತೆರವು ಕಾರ್ಯ ಕೈಬಿಟ್ಟರು.
ಐಟಿಐ ಬಳಿ ಅನಧಿಕೃತ ಬಸ್ ನಿಲ್ದಾಣ ನಿರ್ಮಾಣವಾಗಿರುವ ಕುರಿತು ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಅವರು ಕೌನ್ಸಿಲ್ ಸಭೆಯಲ್ಲಿ ಆರೋಪಿಸಿ ನಿಲ್ದಾಣವನ್ನು ತೆರವುಗೊಳಿಸದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಬಿಬಿಎಂಪಿ ಜಂಟಿ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳು ಜೆಸಿಬಿ ಮೂಲಕ ತೆರವಿಗೆ ಮುಂದಾದರು.
ನಿಲ್ದಾಣವನ್ನು 2 ದಿನಗಳ ಹಿಂದೆ ಶಾಸಕ ಬಿ.ಎ.ಬಸವರಾಜ್ ಉದ್ಘಾಟಿಸಿದ್ದರು. ಶುಕ್ರವಾರ ಮಹದೇವಪುರ ಜಂಟಿ ಆಯುಕ್ತ ಉಮಾನಂದ ರೈ ಅವರು ಅಧಿಕಾರಿಗಳೊಂದಿಗೆ ತೆರವುಗೊಳಿಸಲು ಮುಂದಾದಾಗ ಪಾಲಿಕೆ ಸದಸ್ಯರಾದ ಕೆ.ಶ್ರೀಕಾಂತ್ ಮತ್ತು ಸುರೇಶ್ ಸೇರಿ ನೂರಾರು ಸಾರ್ವಜನಿಕರು ನಿಲ್ದಾಣವನ್ನು ತೆರವುಗೊಳಿಸದಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈ ಬಿಟ್ಟರು.