ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಆರೋಗ್ಯ ಸೇವೆ ಅಬಾಧಿತ: ಮುನ್ನೆಚ್ಚರಿಕೆಯಾಗಿ ರಾಜ್ಯ ಸರ್ಕಾರದಿಂದ ಪರ್ಯಾಯ ವ್ಯವಸ್ಥೆ

ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ಆರೋಗ್ಯ ಕವಚ ನೌಕರರು ನಡೆಸುತ್ತಿರುವ ಮುಷ್ಕರ ಯಾವುದೇ ...

ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ಆರೋಗ್ಯ ಕವಚ ನೌಕರರು ನಡೆಸುತ್ತಿರುವ ಮುಷ್ಕರ ಯಾವುದೇ ರೀತಿಯಿಂದಲೂ ಪರಿಣಾಮ ಬೀರುತ್ತಿಲ್ಲ. ಮುನ್ನೆಚ್ಚರಿಕೆಯಿಂದಲೇ ಪರ್ಯಾಯವಾಗಿ ಕ್ರಮ ಕೈಗೊಂಡಿರುವ ಸರ್ಕಾರ ಎಂದಿನಂತೆ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್ ಲಕ್ಷ್ಮಿ ನಾರಾಯಣ ತಿಳಿಸಿದರು.

ಈ ನಡುವೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ, ಆರೋಗ್ಯ ಕವಚ 108 ಚಾಲಕರ ಮುಷ್ಕರದಿಂದ ಜನಸಾಮಾನ್ಯರ ಆರೋಗ್ಯ ಸೇವೆಗೆ ತೊಂದರೆಯುಂಟಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಶೇ.93ರಷ್ಟು ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

ಒಟ್ಟು 1740 ಚಾಲಕರ ಪೈಕಿ ಕೇವಲ 350 ಚಾಲಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಅಷ್ಟೂ ಪ್ರಮಾಣದ ಚಾಲಕರನ್ನು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಿಂದ ಪಡೆಯಲಾಗಿದೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ ಸೇರಿದಂತೆ ಐದಾರು ಜಿಲ್ಲೆಗಳಲ್ಲಿ 108 ಆರೋಗ್ಯ ಸೇವೆ ಶೇ.100 ರಷ್ಟು ಲಭ್ಯವಿದೆ. ಉಳಿದ ಕಡೆ ಶೇ.93 ರಷ್ಟು ಲಭ್ಯವಿದೆ. ರಾಜ್ಯದಲ್ಲಿ 704 ಆ್ಯಂಬುಲೆನ್ಸ್‌ಗಳ ಪೈಕಿ 670 ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ 69 ಆ್ಯಂಬುಲೆನ್ಸ್‌ ಪೈಕಿ 64 ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದರು.

108 ಆರೋಗ್ಯ ಸೇವೆಗೆ ಚಾಲಕರನ್ನು ಜಿವಿಕೆ ಸಂಸ್ಥೆಯಿಂದ ಹೊರಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗಿದೆ. ಸೇವೆಗೆ ಅಡ್ಡಿಪಡಿಸುವ ಹಾಗೂ ರೋಗಿಗಳಿಗೆ ತೊಂದರೆ ಕೊಡುವ ಚಾಲಕರ ವಿರುದ್ಧ ಎಸ್ಮಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಅಂತಹ ಪ್ರಮೇಯ ಬಂದಿಲ್ಲ. 108 ಸೇವೆಯನ್ನು ಜಿವಿಕೆ ಸಂಸ್ಥೆಗೆ ಹೊರಗುತ್ತಿಗೆಯಡಿ ಕೊಟ್ಟಿರುವುದರಿಂದ ಚಾಲಕರನ್ನು ನಾವು ಕೆಲಸದಿಂದ ತೆಗೆದುಹಾಕಲು ಬರುವುದಿಲ್ಲ. ಆದರೆ, ಜಿವಿಕೆ ಸಂಸ್ಥೆಗೆ ಶೋಕಾಸ್‌ ನೋಟಿಸ್‌ ನೀಡಿದ್ದೇವೆ. ಪರ್ಯಾಯ ಸೇವೆಗೆ ಅಡ್ಡಿಪಡಿಸಿದರೆ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು.

ಆರೋಗ್ಯ ಕವಚ 108 ನೌಕರರ ವೇತನ ಹೆಚ್ಚಳ ಕುರಿತು ಸರ್ಕಾರ ಈಗಾಗಲೇ ಕ್ರಮ ಕೈಗೊಂಡು ಆದೇಶವನ್ನೂ ಹೊರಡಿಸಿದೆ. ಇದರಿಂದ ಸರ್ಕಾರಕ್ಕೆ 6.64 ಕೋಟಿ ರೂ. ಹೊರೆಯೂ ಆಗುತ್ತದೆ. ಆದರೂ ಜನರ ಹಿತದೃಷ್ಟಿಯಿಂದ ಒಪ್ಪಲಾಗಿದೆ. ಇಷ್ಟಾದರೂ ಯಾರದೋ ಮಾತು ಕೇಳಿ ಮುಷ್ಕರ ನಡೆಸಿ ತೊಂದರೆ ನೀಡಲಾಗುತ್ತಿದೆ. ಸರ್ಕಾರ ಸಮಸ್ಯೆ ಇರುವ ಕಡೆ ಪರ್ಯಾಯ ಕ್ರಮ ಕೈಗೊಂಡಿದೆ. ಅದರಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಆರೋಗ್ಯ ಇಲಾಖೆ ಚಾಲಕರನ್ನು 108 ಸೇವೆಗೆ ಪಡೆಯಲಾಗಿದೆ. ಅಗತ್ಯವಾದರೆ ಮತ್ತಷ್ಟು ಪಡೆಯಲು ಸಿದ್ಧ. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಮುಷ್ಕರ ನಡೆಸಿ ತೊಂದರೆಯುಂಟು ಮಾಡಿದ 152 ಚಾಲಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ದೈನಂದಿನ ಕೆಲಸದಲ್ಲಿ ಶ್ರದ್ಧೆ ತೋರದವರ ವಿರುದ್ಧ ನಾವು ಶಿಸ್ತು ಕ್ರಮ ಕೈಗೊಳ್ಳುತ್ತಿರುವುದೂ ಮುಷ್ಕರಕ್ಕೆ ಕಾರಣವಾಗಿದೆ. ಚಾಲಕರ ಬೇಡಿಕೆಗಳಿಗೆ ನಾವು ಸ್ಪಂದಿಸಿದ್ದೇವೆ, ಸರ್ಕಾರವೂ ಸ್ಪಂದಿಸಿದೆ. ಆದರೂ ಕೆಲವರ ಮಾತು ಕೇಳಿ ಮುಷ್ಕರ ನಡೆಸಲಾಗುತ್ತಿದೆ ಎಂದು ಜಿವಿಕೆ ಸಂಸ್ಥೆ ಮುಖ್ಯಸ್ಥ ಅಭಿನವ ಕೆ.ಜಯರಾಮ್‌ ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT