ಬೆಂಗಳೂರು: ನಗರದ ಹೊಸೂರು ರಸ್ತೆಯಲ್ಲಿರುವ ಗ್ರಾನೈಟ್ ಶಾಪ್ ಬಳಿ ಗಾಂಜಾ ಮಾರಾಟದಲ್ಲಿ ತೊಡಗಿಕೊಂಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ರು.2 ಲಕ್ಷ ಮೌಲ್ಯದ 15 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ತಮಿಳುನಾಡಿನ ಧರ್ಮಪುರಿ ನಿವಾಸಿ ಶಿವಕುಮಾರ್(46) ಮತ್ತು ಆನೇಕಲ್ ನಿವಾಸಿ ಅಮಿರ್ ಖಾನ್(36) ಎಂದು ಹೆಸರಿಸಲಾಗಿದೆ.
ನಿನ್ನೆ ಹೊಸೂರು ರಸ್ತೆಯಲ್ಲಿರುವ ಗ್ರಾನೈಟ್ ಶಾಪ್ ಬಳಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರ ಬಳಿಯಿದ್ದ ಸುಮಾರು ರು.2 ಲಕ್ಷ ಮೌಲ್ಯದ ಗಾಂಜಾ, ಮೂರು ಮೊಬೈಲ್ ಫೋನ್ ಮತ್ತು ಅವರು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.