ಬಾಗಲಕೋಟೆ: ಕನ್ನಡದ ಮೊದಲ ಶಾಸನ ಹಲ್ಮಿಡಿ ಅಲ್ಲ. ಚಿತ್ರದುರ್ಗ ಜಿಲ್ಲೆಯ ತಗರ್ತಿ ಶಾಸನ!
ಈವರೆಗೂ ಕನ್ನಡ ಸಾರಸ್ವತ ಲೋಕ ನಂಬಿಕೊಂಡು ಬಂದಿರುವ ಮತ್ತು ಅದೇ ಸತ್ಯ ಎಂದು ಪ್ರತಿಪಾದಿಸುತ್ತಿರುವ ಸಾಹಿತ್ಯ ದಿಗ್ಗಜರ ನಂಬುಗೆಯನ್ನೇ ಬುಡಮೇಲು ಮಾಡುವ ಹೊಸದಾದ ಮತ್ತು ಅಷ್ಟೇ ಕ್ರಾಂತಿಕಾರಕ ಎನಿಸಿರುವ ಸತ್ಯವೊಂದನ್ನು ರಾಜ್ಯದ ಹೆಸರಾಂತ ಇತಿಹಾಸಕಾರ ಡಾ. ಷ. ಶೆಟ್ಟರ್ ಮಂಡಿಸುವ ಮೂಲಕ ಹೊಸ ಚಿಂತನೆಗೆ ನಾಂದಿ ಹಾಡಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗ, ಕರ್ನಾಟಕ ಜಾನಪದ ಪರಿಷತ್ ಜಂಟಿಯಾಗಿ ಶನಿವಾರ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಆಯೋಜಿಸಿದ್ದ ಎರಡು ದಿನಗಳ 'ಅಖಿಲ ಕರ್ನಾಟಕ 9ನೇ ಹಸ್ತಪ್ರತಿ ಸಮ್ಮೇಳನ'ವನ್ನು ಉದ್ಘಾಟಿಸಿ, ಕರ್ನಾಟಕದಲ್ಲಿ ಕ್ರಿ.ಶ. 360ರ ಹೊತ್ತಿಗೆ ಕನ್ನಡ ಭಾಷೆ ಸಮೃದ್ಧವಾಗಿತ್ತು. ಅದಕ್ಕೂ ಹಿಂದೆ ಅಂದರೆ ಸುಮಾರು ಕ್ರಿ.ಶ. 350ರಲ್ಲಿ ಚಿತ್ರದುರ್ಗದ ತಗರ್ತಿ ಬಳಿ ಗಂಗರ ಅರಸರು ಶಾಸನ ಕೊರೆಸಿದರು. ನಂತರ ಕೆಲವೇ ವರ್ಷಗಳ ಅಂತರದಲ್ಲಿ ಹಿರೇಹಡಗಲಿ ಮ್ಯಾಕಡೋಲಿ, ಶಿವಪುರ ಶಾಸನಗಳು ರಚಿತವಾಗಿದ್ದು ಗಮನಕ್ಕೆ ಬರುತ್ತವೆ ಎಂದರು.