ಬಾಗಲಕೋಟೆ

11 ಕೊಳವೆ ಬಾವಿ ಕೊರೆದರೂ ಹನಿ ನೀರಿಲ್ಲ

ಕ.ಪ್ರ. ವಾರ್ತೆ ಬಾಗಲಕೋಟೆ ಮಾ.29
ಹೊತ್ತು ಸಲಹುವ ಭೂಮಿ ಮುನಿದರೆ ದೂರುವುದು ಇನ್ಯಾರನ್ನು?
ಬಾದಾಮಿ ತಾಲೂಕಿನ ತೆಗ್ಗಿ ಗ್ರಾಮದ ಜನತೆ ಇಂಥದೊಂದು ಹತಾಶ ನೋವಿನಲ್ಲಿದ್ದಾರೆ. ಕಳೆದೆರಡು ವರ್ಷಗಳಿಂದ ಆವರಿಸಿರುವ ಭೀಕರ ಬರಗಾಲ ಈ ಗ್ರಾಮದ ವ್ಯಾಪ್ತಿಯ ಅಂತರ್ಜಲವನ್ನೇ ಆಪೋಶನ ಮಾಡಿದ್ದರಿಂದ ಕುಡಿಯುವ ನೀರಿಗಾಗಿ ಇವರು ಪಾಡು ಹೇಳತೀರದು.
ಇವರ ನೋವಿಗೆ ಸ್ಪಂದಿಸಿದ ಜಿಲ್ಲಾಡಳಿತ ಕುಡಿಯುವ ನೀರು ಪೂರೈಸಲೆಂದು ಬರೊಬ್ಬರಿ 11 ಕೊಳವೆ ಬಾವಿಗಳನ್ನು 300-350 ಅಡಿ ಕೊರೆಸಿದರೂ ಯಾವುದರಲ್ಲೂ ಹನಿ ನೀರೂ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಅತಿಯಾದಾಗ ಗ್ರಾಪಂ, ಜಿಲ್ಲಾಡಳಿತ, ಶಾಸಕ, ಮಂತ್ರಿಗಳನ್ನು ದೂರುತ್ತಿದ್ದ ಈ ಗ್ರಾಮಸ್ಥರು ಭೂಮಿಯ ಆಂತರ್ಯ ಬತ್ತಿ ಬರಿದಾಗಿರುವ ಪರಿಸ್ಥಿತಿ ಕಂಡು ಮತ್ತೊಬ್ಬರೆಡೆ ಬೊಟ್ಟು ಮಾಡಲು ಮನಸ್ಸೇ ಬರುತ್ತಿಲ್ಲ.
ಈಗ ಉಳಿದಿರುವ ಏಕೈಕ ಮಾರ್ಗ ಗ್ರಾಮದ ಪಕ್ಕದಲ್ಲೇ ಇರುವ ಫರಸಿಹಳ್ಳ. ಮಳೆಗಾಲದಲ್ಲಿ ಇದು ತುಂಬಿ ಹರಿಯುತ್ತದೆ. ಇದಕ್ಕೆ ಅಡ್ಡಲಾಗಿ ಕಿರು ಸೇತುವೆ ಕಂ ಬ್ಯಾರೇಜು ನಿರ್ಮಿಸಿದ್ದರಿಂದ ಅಕ್ಕ-ಪಕ್ಕದ ಕೊಳವೆ ಬಾವಿ, ತೆರೆದ ಬಾವಿಗಳ ಅಂತರ್ಜಲಕ್ಕೆ ಸಾಥ್ ನೀಡುತ್ತಿದ್ದರಿಂದ ಈ ಗ್ರಾಮ ಎಂದೂ ಕುಡಿಯುವ ನೀರಿನ ಬವಣೆಯನ್ನೇ ಎದುರಿಸಿರಲಿಲ್ಲ. ಅದೇಕೋ ಈ ಬಾರಿ ಸೃಷ್ಟಿಯ ಮುನಿಸಿನಿಂದಾಗಿ ಈ ಹಳ್ಳವೂ ಬರಿದಾಗಿದೆ. ಬ್ಯಾರೇಜಿನ ಆಳದಲ್ಲಿ ಗುಂಡಿ ತೋಡಿದ್ದಾರೆ. ಅಲ್ಲಿ ಸಿಗುವ ಅಷ್ಟು-ಇಷ್ಟು ನೀರನ್ನೇ ಹಂಚಿ ಕುಡಿಯುತ್ತಿದ್ದಾರೆ.
ಕಲುಷಿತ ನೀರೇ ಆಧಾರ: ಈ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಸುತ್ತೆಲ್ಲೂ ನೀರಿನ ಲಭ್ಯತೆ ಇಲ್ಲ. ಟ್ಯಾಂಕರ್ ಮೂಲಕ ಪೂರೈಸಬೇಕೆಂದರೂ 15-20 ಕಿ.ಮೀ ಕ್ರಮಿಸಬೇಕು. ಹಲವು ಬಾರಿ ಮನವಿ ಸಲ್ಲಿಸಿದ ಬಳಿಕ ತನ್ನ ಕುಂಭಕರ್ಣನ ನಿದ್ರೆಯಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸಲು ಮುಂದಾದರೂ ಅದು ಅರೆಕಾಸಿನ ಮಜ್ಜಿಗೆ ಆಗುತ್ತಿದೆ. ಈ ಸುಗ್ಗಿಯ ಕಾಲದಲ್ಲಿ ಈ ಟ್ಯಾಂಕರ್‌ಗಾಗಿ ದಿನವಿಡೀ ಕಾದು ಕೂರುವುದು ಗ್ರಾಮಸ್ಥರಿಗೆ ಕಷ್ಟವಾಗುತ್ತಿದೆ. ಅದಕ್ಕೆ ಬ್ಯಾರೇಜ್ ಒಡಲಿನ ಆಳ ಗುಂಡಿಯ ಕಲುಷಿತ ನೀರನ್ನೇ ಗಟ್ಟಿ ಧೈರ್ಯದಿಂದ ಕುಡಿಯುತ್ತಿದ್ದಾರೆ. ಅದೂ ಬತ್ತುತ್ತಿದೆ.
ಕಲುಷಿತ ನೀರಿಗೂ ಪೈಪೋಟಿ ನಡೆಸುವ ದುರ್ದೆಸೆ ಈ ಗ್ರಾಮಸ್ಥರಿಗೆ ಒದಗಿ ಬಂದಿದೆ. ಕುಡಿಯುವ ನೀರಿನ ಪರಿಸ್ಥಿತಿಯೇ ಹೀಗೆ. ಇನ್ನು ಸ್ನಾನ, ಮನೆ ಬಳಕೆ, ಜಾನುವಾರುಗಳ ಪಾಡು ನಿಜಕ್ಕೂ ಮನಸ್ಸು ಮಮ್ಮಲ ಮರುಗುತ್ತದೆ.
ಕೊನೆಯ ಭರವಸೆ: ಹಿಂದೆಂದೋ ಇದೇ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲೆಂದು 6 ಕಿ.ಮೀ. ಅಂತರದಲ್ಲಿರುವ ಬೇಡರಬೂದಿಹಾಳ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯಲಾಗಿತ್ತಂತೆ. ಅದು ಹೇಗೋ ಕೆಲವಡಿ ಗ್ರಾಮ ಪಂಚಾಯತಿಯ ನೆನಪಿಗೆ ಬಂದು ಅಲ್ಲಿಗೆ ಹೋಗಿ ನೋಡಲಾಗಿ ಆಳದಲ್ಲಿ ನೀರು ಜಿನುಗುತ್ತಿರುವುದು ಕಂಡಿದೆ.
ಹಾಳು ಬಾವಿಯಲ್ಲಿ ನಿಧಿ ಕಂಡಷ್ಟು ಉಲ್ಲಸಿತವಾಗಿರುವ ಕೆಲವಡಿ ಗ್ರಾಪಂ ಸದ್ಯ ಆ ಕೊಳವೆ ಬಾವಿಗೆ ಮೋಟರ್ ಪೈಪ್‌ಲೈನ್ ಅಳವಡಿಸಿ ನೀರು ಪೂರೈಸಲು ಮುಂದಾಗಿದೆ. ಕೊನೆಯ ಪ್ರಯತ್ನ ಸಫಲವಾದರೆ ತೆಗ್ಗಿ ಗ್ರಾಮಸ್ಥರ ನೀರಿನ ಬವಣೆ ತುಸು ಮಟ್ಟಿಗೆ ನಿವಾರಣೆಯಾಗಲಿದೆ. ಅದೂ ಕೈಕೊಟ್ಟರೆ ಮುಂಗಾರು ಮಳೆಯಾಗುವರೆಗೆ ಆಕಾಶದ ಮೋಡಗಳನ್ನು ನೋಡಬೇಕಷ್ಟೇ.
-ಮಲ್ಲಿಕಾರ್ಜುನ ಸಿದ್ದಣ್ಣವರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!