ಮುಧೋಳ: ಬೇಟೆ ನಾಯಿ, ಕುಸ್ತಿ, ಸಕ್ಕರೆ ಉದ್ದಿಮೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಮುಧೋಳ ಇತ್ತ ನಗರವೂ ಅಲ್ಲದ ಅತ್ತ ಪೂರ್ಣಪ್ರಮಾಣದ ಪಟ್ಟಣ ಅನ್ನಿಸಿಕೊಳ್ಳಲು ಹಿಂದೇಟು ಹಾಕುತ್ತಿದೆ.
ಇಲ್ಲಿ ಕಸದ್ದೇ ಕಾರುಬಾರು. ಘನತ್ಯಾಜ್ಯ ವಿಲೇವಾರಿಗೆ ಅಗತ್ಯವಾಗಿ ಬೇಕಾಗುವ ಆಧುನಿಕ ಸಂದರ್ಭದ ಎಲ್ಲ ವ್ಯವಸ್ಥೆ ಇಲ್ಲಿದ್ದರೂ ನಿರ್ವಹಣೆ ಲೋಪದಿಂದಾಗಿ ಸರ್ಕಾರಿ ಅನುದಾನ ಮೂರಾಬಟ್ಟೆಯಾಗಿದೆ. ಯಂತ್ರಗಳು ಬಿಸಿಲು, ಗಾಳಿಗೆ ಮೈಯೊಡ್ಡಿ ತುಕ್ಕು ಹಿಡಿಯುತ್ತಿವೆ.
ಇಲ್ಲಿ ರಾಜಕೀಯವಾಗಿ ಪ್ರಭಾವಿಗಳಿದ್ದಾರೆ. ಸ್ವಂತ ವರ್ಚಸ್ಸು ಇರುವ ರಾಜಕಾರಣಿಗಳು ಎರಡೂ ಪಕ್ಷದಲ್ಲಿದ್ದಾರೆ. ಆದರೆ ಪುರಸಭೆಗೆ ಅನುದಾನದ ಕೊರತೆ ಕಾಡುತ್ತಿದೆ. ಕಸ ವಿಲೇವಾರಿಯ ಜೊತೆಗೆ ಪಟ್ಟಣದಲ್ಲಿ ಮೂಲಭೂತ ಸೌಲಭ್ಯದ ಕೊರತೆಯೂ ಕಾಣುತ್ತಿದೆ.
ಮುಧೋಳ ಪುರಸಭೆ ವ್ಯಾಪ್ತಿಯಲ್ಲಿ 27 ವಾರ್ಡ್ಗಳಿದ್ದು 15 ವಾರ್ಡ್ಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸಲಾಗುತ್ತಿದೆ. ಪ್ರತಿ ಮನೆಗೂ ಕಸ ಸಂಗ್ರಹಿಸಲು ಬಕೆಟ್ ನೀಡಲಾಗಿದೆ. ಅಲ್ಲಲ್ಲಿ ಕಸ ಹಾಕಲು ಕಂಟೈನರ್ಗಳನ್ನು ಅಳವಡಿಸಲಾಗಿದೆ. ನಾಗರಿಕರು ಬಕೆಟ್ನಲ್ಲಿ ಸಂಗ್ರಹಿಸುವ ಕಸವನ್ನು ಕಂಟೈನರ್ಗಳಿಗೆ ತಂದು ಸುರಿಯುವರು. ಉಳಿದ 12 ವಾರ್ಡಗಳಿಗೆ ಈ ವ್ಯವಸ್ಥೆ ಇಲ್ಲ. ಅದಕ್ಕೊಂದು ಬಜೆಟ್ ರೆಡಿ ಮಾಡಿಕೊಂಡು ಮುಂದಡಿ ಇಡಬೇಕಾದ ಅನಿವಾರ್ಯತೆ ಪುರಸಭೆಗೆ ಇದೆ.
ಟಂಟಂ ಗಾಡಿಯಲ್ಲಿ ಸಾಗಣೆ: ನಗರದಲ್ಲಿ ಸಂಗ್ರಹಿಸಿದ ಕಸವನ್ನು ಟಂಟಂ ಗಾಡಿಯಲ್ಲಿ ಒಯ್ದು ಉತ್ತೂರು ಕ್ರಾಸ್ ಸಮೀಪದ ಘನತ್ಯಾಜ್ಯ ಸಂಗ್ರಹ ಘಟಕದಲ್ಲಿ ಸುರಿಯಲಾಗುತ್ತಿದೆ. 11 ಎಕರೆ ವಿಸ್ತೀರ್ಣ ಹೊಂದಿರುವ ಈ ಪ್ರದೇಶದಲ್ಲಿ ನೆಲಭರ್ತಿ ಘಟಕ, ಕಸ ಪ್ರತ್ಯೇಕಗೊಳಿಸುವ ಹಾಗೂ ಪ್ಲಾಸ್ಟಿಕ್ ಬೇರ್ಪಡಿಸುವ ಯಂತ್ರಗಳಿವೆ. ಎರೆಹುಳ ಗೊಬ್ಬರ ತಯಾರಿಸುವುದಕ್ಕೂ ಇಲ್ಲಿ ಅವಕಾಶವಿದೆ. ಆದರೆ ಅನುದಾನದ ಕೊರತೆ, ಕಾರ್ಮಿಕರ ಅಲಭ್ಯತೆ ಕಾರಣಕ್ಕೆ ಅಂದುಕೊಂಡದ್ದು ಸಾಧಿಸಲಾಗುತ್ತಿಲ್ಲವೆಂಬ ಕೊರಗು ಪುರಸಭೆ ಅಧಿಕಾರಿಗಳದ್ದು. ಕಾರ್ಮಿಕರ ಕೊರತೆಯಿಂದಾಗಿ ಕಂಟೈನರ್ಗಳಲ್ಲಿ ಸಂಗ್ರಹವಾದ ಕಸ ನಿಗದಿತ ವೇಳೆಗೆ ಒಯ್ಯಲು ಸಾಧ್ಯವಾಗದೆ ಚರಂಡಿ ಪಾಲಾಗುತ್ತಿದೆ ಎಂಬ ನೋವು ಅವರಲ್ಲಿದೆ.
ಮುಧೋಳ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಇಷ್ಟರಲ್ಲೆ ಸರ್ಕಾರದ ಅಧಿಕೃತ ಆದೇಶ ಹೊರಬೀಳು ಸಾಧ್ಯತೆ ಇದೆ. ನಗರಸಭೆಯಾಗಿ ಮೇಲ್ದರ್ಜೆಗೆ ಏರುವುದರಿಂದ ಹೆಚ್ಚಿನ ಪ್ರಮಾಣದ ಅನುದಾನ ಬರಲಿದೆ ಮತ್ತು ಕಾರ್ಮಿಕರು ಹಾಗೂ ಕಸ ವಿಲೇವಾರಿ ಮಾಡುವ ವಾಹನಗಳ ಸಂಖ್ಯೆ ಇಮ್ಮಡಿಗೊಳ್ಳಲಿದೆ ಎಂಬ ನಂಬಿಕೆ ಪುರಸಭೆ ಮುಖ್ಯಾಧಿಕಾರಿ ಸಂಗಪ್ಪ ಬ್ಯಾಳಿ ಅವರದ್ದು.