ರಬಕವಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮರೇಂದ್ರ ಮೋದಿ ಅಲೆಗೆ ಕಾಂಗ್ರೆಸ್ ತತ್ತರಿಸಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಶನಿವಾರ ರಾತ್ರಿ ಬನಹಟ್ಟಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,
ದೇಶದ ಜನತೆ ಬಿಜೆಪಿಗೆ ನೀಡಿರುವ ಅಭೂತಪೂರ್ವ ಯಶಸ್ಸಿಗೆ ಗೌರವ ಸಲ್ಲಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳ ಮೂಲಕ ಅವರ ಏಳ್ಗೆಗಾಗಿ ಶ್ರಮಿಸುವುದಾಗಿ ಹೇಳಿದರು.
ಕಾಂಗ್ರೆಸ್‌ನ ಜನ ವಿರೋಧಿ ಕೆಲಸಗಳಿಂದ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲವು ಸಿಕ್ಕಿದೆ ಎಂದರು.
ಜಿಲ್ಲೆಯ ಜನತೆ ತಮ್ಮನ್ನು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿರುವುದು ಪ್ರಶಂಸನಾರ್ಹ. ಜಿಲ್ಲೆಯ ಜನತೆ ಮತ್ತೇ ನನ್ನನ್ನು ಮೂರನೇ ಬಾರಿಯೂ ಸೇವೆ ಸಲ್ಲಿಸಲು ಜನಾದೇಶ ನೀಡಿರುವುದಕ್ಕೆ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದರು.
ಹಿಂದಿನ ಎರಡು ಚುನಾವಣೆಗಳಲ್ಲಿ ತೇರದಾಳ ವಿಧಾನಸಭೆ ಕ್ಷೇತ್ರದ ಮತದಾರರು ನನಗೆ ಹೆಚ್ಚಿನ ಮತಗಳ ಅಂತರ ನೀಡಿದ್ದರು. ಅದೇ ರೀತಿ ಈ ಬಾರಿಯೂ ದಾಖಲೆಯ 35ಸಾವಿರ ಮತಗಳ ಅಂತರ ನೀಡುವ ಮೂಲಕ ನನ್ನ ಗೆಲವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
ಮುಂಬರುವ ಚುನಾವಣೆಗಳಲ್ಲೂ ಇದೇ ಸಾಧನೆ ಮೆರೆಯಬೇಕೆಂದು ಮಾಜಿ ಶಾಸಕ ಸಿದ್ಧು ಸವದಿ ಮನವಿ ಮಾಡಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 2ಕಿಮೀನಷ್ಟು ಪಕ್ಷದ ಕಾರ್ಯಕರ್ತರೊಡನೆ ತೆರೆದ ವಾಹನದಲ್ಲಿ ಗದ್ದಿಗೌಡರ ಮತ್ತು ಸಿದ್ಧು ಸವದಿಯವರ ಮೆರವಣಿಗೆ ನಡೆಯಿತು. ತೇರದಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಡಿ.ಆರ್.ಪಾಟೀಲ,ನಗರ ಬಿಜೆಪಿ ಅಧ್ಯಕ್ಷ ಬಸವರಾಜ ತೆಗ್ಗಿ, ಬಸಯ್ಯ ಹಿರೇಮಠ, ಶಂಕರ ಗೊಬ್ಬಾಣಿ, ಪುಂಡಲೀಕ ಪಾಲಬಾಂವಿ, ಜಿಪಂ ಮಾಜಿ ಅಧ್ಯಕ್ಷ ಎಂ.ಎಂ.ಹಟ್ಟಿ,ದುಂಡಪ್ಪ ಮಾಚಕನೂರ, ಹರ್ಷವರ್ಧನ ಪಟವರ್ಧನ, ಜಿಪಂ ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ಸೋಮಯ್ಯ ಮಠದ, ರಾಜು ಬಣಕಾರ, ಸಿದ್ಧನಗೌಡ ಪಾಟೀಲ ಮುಂತಾದವರಿದ್ದರು.