ದೊಡ್ಡಬಳ್ಳಾಪುರ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್, ನ್ಯಾಯಾಧಿಕರಣ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಎಸಗುತ್ತಿವೆ ಎಂದು ಇಲ್ಲಿನ ತಾಲೂಕು ಕನ್ನಡ ಪಕ್ಷ ಆರೋಪಿಸಿದೆ. ಕಾವೇರಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಕನ್ನಡ ಪಕ್ಷದ ನೇತೃತ್ವದಲ್ಲಿ ಇಲ್ಲಿನ ಅಂಬೇಡ್ಕರ್ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲೇ ಭೀಕರ ಬರ, ನೀರಿಗೆ ತತ್ವಾರ ಇರುವ ಸಂದರ್ಭದಲ್ಲಿ ಸ್ಥಿತಿಗತಿಗಳನ್ನೂ ಅವಲೋಕಿಸದೆ ತಮಿಳುನಾಡಿಗೆ 2.5 ಟಿಎಂಸಿ ನೀರು ತಕ್ಷಣ ಬಿಡಬೇಕು ಎಂದು ಆದೇಶ ನೀಡಿರುವ ಸುಪ್ರೀಂ ಕೋರ್ಟ್ ವಸ್ತುಸ್ಥಿತಿಯನ್ನರಿತು ಆದೇಶಿಸಬೇಕಿತ್ತು. ಅದೇ ರೀತಿ ತೀರ್ಪು ಪ್ರಕಟಿಸಲು ತುದಿಗಾಲಲ್ಲಿ ನಿಂತಿರುವ ಕಾವೇರಿ ನ್ಯಾಯಾಧಿಕಾರಣ ತನ್ನ ತೀರ್ಪು ಮರುಪರಿಶೀಲಿಸಬೇಕು. ಕರ್ನಾಟಕದ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಅವಲೋಕಿಸಿದ ನಂತರವಷ್ಟೇ ತೀರ್ಪು ನೀಡಬೇಕು. ಸಾಂಬಾ ಬೆಳೆಗೆ ತಮಿಳುನಾಡು ನೀರು ಕೇಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದೂ ಪ್ರಶ್ನಾರ್ಹವೇ. ಕರ್ನಾಟಕದಲ್ಲಿ ವರ್ಷಕ್ಕೊಂದು ಬೆಳೆ ತೆಗೆಯಲೂ ರೈತರಿಗೆ ನೀರು ಕೊರತೆ ಇದೆ. ಆದರೆ ತಮಿಳುನಾಡಿನಲ್ಲಿ ವರ್ಷಕ್ಕೆ 2, 3 ಬೆಳೆ ತೆಗೆಯಲು ನೀರು ಕೇಳಲಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಸುಪ್ರೀಂ ಕೋರ್ಟ್ ವಸ್ತುಸ್ಥಿತಿಯನ್ನರಿತು ನ್ಯಾಯ ನೀಡಬೇಕು ತಪ್ಪಿದಲ್ಲಿ ರಾಜ್ಯದಲ್ಲಿ ಗಂಭೀರ ಸ್ವರೂಪದ ಹೋರಾಟ ಆರಂಭವಾಗಲಿದೆ. ಕಾನೂನು ಸುವ್ಯವಸ್ಥೆಗೆ ಭಂಗವಾದರೆ ಸರ್ಕಾರವೇ ಹೊಣೆಯಾಗಬೇಕಾದೀತು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಮುಖಂಡರಾದ ಪರಮೇಶ್, ಮಂಜುನಾಥ್, ಪ್ರಕಾಶ್ರಾವ್, ಮುನಿರಾಜು ಸೇರಿದಂತೆ ಅನೇಕರು ಹಾಜರಿದ್ದರು.