ದೇವನಹಳ್ಳಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಪುರಸಭಾಧ್ಯಕ್ಷ ಎ.ಎನ್. ವಸಂತಬಾಬು ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಮಕ್ಕಳಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧಿಕಾರಿಗಳಾದ ಡಾ.ಜಯಲಕ್ಷ್ಮಿ ಮಾತನಾಡಿ ದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಆದರೆ ಹೊರದೇಶಗಳಲ್ಲಿ ಪೋಲಿಯೋ ಪೀಡಿತ ಮಕ್ಕಳು ಈಗಲೂ ಇದ್ದಾರೆ ಎಂದರಲ್ಲದೆ ಆಗತಾನೇ ಹುಟ್ಟಿದ ಮಗುವಿನಿಂದ ಹಿಡಿದು ಐದು ವರ್ಷದೊಳಗಿನ ಎಲ್ಲ ಮಕ್ಕಳು ಪೋಲಿಯೋ ಹನಿಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಇದರಲ್ಲಿ ಪೋಷಕರು ಸಹಕರಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿಡಾ. ಪ್ರಿಯಲತಾ ಅವರು ಮಾತನಾಡಿ ಇತರ ಇಲಾಖೆ ಅಧಿಕಾರಿಗಳ ಮತ್ತು ಪೋಷಕರ ಸಹಕಾರದಿಂದ ಈಗ ಪ್ರತಿಫಲ ದೊರಕಿದೆ ಅಂದರೆ ಕಳೆದ ಎರಡು ವರ್ಷಗಳಿಂದ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ ಎಂದರು.
ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿಗಳಾದ ಡಾ.ರಮೇಶ್ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷರಾದ ರಾಧಿಕಾ ನಾಗರಾಜ್ ವಹಿಸಿದ್ದರು, ಅತಿಥಿಗಳಾಗಿ ಪುರಸಭಾ ಮುಖ್ಯಾಧಿಕಾರಿ ಬಿ.ಎಸ್.ಸುಮ, ಡಬ್ಲೂಎಚ್ಒ ಸಂಸ್ಥೆಯ ಮಾನಿಟರ್ ಅಮಿತ್ ಇದ್ದರು.