ವಿಜಯಪುರ: ವಿಜಯಪುರ ಹಾಗೂ ಆಂಧ್ರದ ಆಯತ್ ನಗರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ 5 ಮಂದಿ ಅಂತರಾಜ್ಯ ದರೋಡೆಕೋರರನ್ನು ಬಂಧಿಸಲಾಗಿದೆ. ದರೋಡೆಕೋರರು ಆಂಧ್ರದ ರುದ್ರಂ ಪೇಟದ ಪಾಲ್ ಶಿವ(37),ಪಾಲ್ ವಿಜಯ್ (40), ಪಾಲ್ ಕರ್ಣಕುಮಾರ್ (22), ಪಾಲ್ ವೆಂಕಟೇಶ್ವರ ರಾವ್ (37), ಪಾಲ್ ಜಸ್ವ(35)ಎಂದು ಹೇಳಲಾಗಿದೆ.ಅವರು ಕಳೆದ ಮಾರ್ಚ 11 ರಂದು ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗೋವಿಂದರಾಜು ಎಂಬುವವರ ಮನೆಯಲ್ಲಿ ರಾತ್ರಿ 2.30 ರ ಸಮಯದಲ್ಲಿ ಒಳ ನುಗ್ಗಿ 900 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ ಹಾಗೂ 5 ಲಕ್ಷನಗದನ್ನು ದೋಚಿ ಪರಾರಿಯಾಗಿದ್ದರು. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕೇಂದ್ರ ವಲಯದ ಐಜಿಪಿ ಅಬ್ದುಲ್ ಅಹ್ಮದ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಡಿ ನೀಡಿ ಪರೀಶಿಲನೆ ನಡೆಸಿದ್ದರು.ದರೋಡೆ ಕೋರರನ್ನು ಬಂಧಿಸಲು ಎರಡು ವಿಶೇಷ ದಂಡಗಳನ್ನು ರಚಿಸಿ ಪ್ರಕರಣವನ್ನು ಬೆನ್ನಟ್ಟಿದ್ದ ಪೊಲೀಸರು ಸುಮಾರು 4 ತಿಂಗಳುಗಳಿಂದ ಶೋಧ ಕಾರ್ಯ ನಡೆಸುತ್ತಿದ್ದರು. ಆಂಧ್ರದ ಆಯತ್ ನಗರ ಪೊಲೀಸರು ಹಾಗೂ ವಿಜಯಪುರ ಪೋಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಅನಂತಪುರಂನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.