ರಾಮನಗರ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ನೂರರ ಸಂಭ್ರಮವನ್ನು ನಾಡಹಬ್ಬವಾಗಿ ಆಚರಿಸಬೇಕು ಎಂದು ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷೆ ವರಲಕ್ಷ್ಮೀ ಸತೀಶ್ ಅಭಿಪ್ರಾಯಪಟ್ಟರು. ತಾಲೂಕು ಕಸಾಪ ಇಲ್ಲಿನ ಬನ್ನಿಕುಪ್ಪೆ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾಸ್ತಿ ನೆನೆಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡಿರುವ ಕಾರ್ಯವನ್ನು ಶ್ಲಾಘಿಸಿದರು. ಕನ್ನಡ ಭಾಷೆಯನ್ನು ಹಲವಾರು ಕವಿಗಳು ಶ್ರೀಮಂತಗೊಳಿಸಿದ್ದಾರೆ. ಈ ಪೈಕಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಗ್ರಗಣ್ಯರು. ಅವರ ಬದುಕು-ಬರಹಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ವಿದ್ಯಾರ್ಥಿಗಳು ಮಾಸ್ತಿ ಅವರ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು. ಮಾಸ್ತಿ ತಮ್ಮ ಜೀವನದುದ್ದಕ್ಕೂ ಕನ್ನಡ ಸೇವೆ ಮಾಡಿದ್ದಾರೆ. ಅವರ ಸಾಹಿತ್ಯದಲ್ಲಿ ಮಾನವೀಯ ಅಂತ-ಕರಣವನ್ನು ಕಾಣಬಹುದಾಗಿದೆ. ಸಣ್ಣ ಕಥೆಗಳ ಜನಕರಾದ ಅವರ ಕಥೆಗಳು ಕಣ್ಣಿಗೆ ಕಟ್ಟುವಂತಿವೆ ಎಂದು ವರಲಕ್ಷ್ಮೀ ಸತೀಶ್ ಬಣ್ಣಿಸಿದರು.
ಸ್ವಯಂ ಸೇವಕ ಹುದ್ದೆಗೆ ಅರ್ಜಿ
ರಾಮನಗರ: 2014-15ನೇ ಸಾಲಿಗೆ ನೆಹರು ಯುವ ಕೇಂದ್ರದಿಂದ ರಾಷ್ಟ್ರೀಯ ಯುವ ದಳದ ಸ್ವಯಂ ಸೇವಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಿದ್ದು 18ರಿಂದ 25 ವರ್ಷದೊಳಿಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಆಯ್ಕೆಯಾದ ಸ್ವಯಂ ಸೇವಕರು ಆರೋಗ್ಯ, ಸಾಕ್ಷರತೆ, ಸ್ವಚ್ಛತೆ ಇನ್ನಿತರ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಚ್ಚೆಯುಳ್ಳವರಾಗಿರಬೇಕು. ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ವಿದ್ಯಾರ್ಹತೆಯುಳ್ಳವರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದವರಿಗೆ ಮಾಸಿಕ ರು.2500 ಗೌರವ ಧನ ನೀಡಲಾಗುವುದು. ಗರಿಷ್ಠ ಸೇವಾವಧಿ 2 ವರ್ಷ ಮಾತ್ರ. ಅರ್ಜಿ ಸಲ್ಲಿಸಲು ಜು.15 ಕಡೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ನೆಹರು ಯುವ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಿ-2, ಜಿ.ಇ.ಎಫ್. ಬ್ಲಾಕ್, 2ನೇ ಮಹಡಿ, ಕೈಗಾರಿಕಾ ನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ರಾಜಾಜಿನಗರ ಬೆಂಗಳೂರು-44, ದೂ.080-23209157 ಸಂಪರ್ಕಿಸಬಹುದು.