ಬೆಂಗಳೂರು ಗ್ರಾಮಾಂತರ

ಬೆಂ-ಮಂಡ್ಯ ಪ್ಯಾಸೆಂಜರ್ ಘೋಷಣೆ

 ಮತ್ತೀಕೆರೆ ಜಯರಾಮ್
ರಾಮನಗರ: ಬೆಂಗಳೂರಿನಿಂದ ರಾಮನಗರ, ಮಂಡ್ಯಕ್ಕೆ ಪ್ಯಾಸೆಂಜರ್ ರೈಲು ಸಂಚಾರ ಪ್ರಾರಂಭಿಸುವ ಘೋಷಣೆ ಮೂಲಕ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡರು ಈ ಭಾಗದ ಜನರ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ.  
ಬೆಂಗಳೂರು-ಮೈಸೂರು ನಡುವಿನ ರೈಲು ಮಾರ್ಗವು ಬ್ರಾಡ್ಗೇಜ್ ಆದಾಗಿನಿಂದ ಕಡೇ ಪಕ್ಷ ಬೆಂಗಳೂರು-ಮದ್ದೂರು ನಡುವೆ ಪ್ಯಾಸೆಂಜರ್ ರೈಲು ಸಂಚಾರ ಬೇಕೆನ್ನುವ ಬೇಡಿಕೆಯನ್ನು ಈ ಭಾಗದ ಪ್ರಯಾಣಿಕರು ಮಂಡಿಸುತ್ತಲೇ ಬಂದಿದ್ದರು. ಅದಕ್ಕೆ ಈಗ ಸ್ಪಂದನೆ ದೊರೆತಿದೆ.
ಮುಕ್ತಿ ಸಿಗುವ ಕಾಲ: ಪ್ರಮುಖವಾಗಿ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯದಿಂದ ನಿತ್ಯ 15 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ರೈಲು ಗಾಡಿಗಳ ಕೊರತೆಯಿಂದ ಅವರೆಲ್ಲ ಅನುಭವಿಸುತ್ತಿದ್ದ ನರಕಯಾತನೆಗೆ ಇದೀಗ ಮುಕ್ತಿ ಸಿಗುವ ಕಾಲ ಕೂಡಿ ಬಂದಿದೆ.
ಕಾಲಿಡಲೂ ಜಾಗವಿಲ್ಲ: ಮೈಸೂರು ಕಡೆಯಿಂದ ಬೆಂಗಳೂರಿಗೆ ಹೋಗುವ, ಸಂಜೆ ವಾಪಸ್ಸಾಗುವ ಪುಷ್ಪುಲ್ ಮತ್ತು ಕಾವೇರಿ ಎಕ್ಸ್ಪ್ರೆಸ್ ರೈಲು ಗಾಡಿಗಳಲ್ಲಿ ಕಾಲಿಡಲೂ ಜಾಗವಿಲ್ಲದಂತಹ ಪರಿಸ್ಥಿತಿ ಇರುತ್ತದೆ. ಈ ರೈಲು ಗಾಡಿಗಳಲ್ಲಿ ಸರ್ಕಾರಿ, ಖಾಸಗಿ ಉದ್ಯೋಗಿಗಳೇ ತುಂಬಿ ತುಳುಕುತ್ತಿರುತ್ತಾರೆ.
ವಾರದ ಪ್ರಾರಂಭದಲ್ಲಿ ಬೆಂಗಳೂರು ಕಡೆಗೆ, ವಾರಾಂತ್ಯದಲ್ಲಿ ಬೆಂಗಳೂರಿನಿಂದ ಪ್ರಯಾಣಿಸುವವರ ಪಾಡು ಹೇಳ ತೀರದಾಗಿದೆ. ಕೂರಲು ಆಸನ ಸಿಗುವ ಮಾತಿರಲಿ, ಎರಡೂ ಕಾಲಿಟ್ಟು ನಿಲ್ಲಲೂ ಜಾಗವಿಲ್ಲದಂತಹ ಸ್ಥಿತಿಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿರುತ್ತಾರೆ.
ಪ್ರಯಾಣಿಕರಿಗೆ ಆನಂದ: ಈ ಭಾಗದ ಪ್ರಯಾಣಿಕರ ಯಾತನಾಮಯ ಪ್ರಯಾಣದ ಅನುಭವ ಅರಿತ ಸದಾನಂದಗೌಡ ಅವರು ಬೆಂಗಳೂರು-ಮಂಡ್ಯ, ಬೆಂಗಳೂರು-ರಾಮನಗರ ನಡುವೆ ಪ್ಯಾಸೆಂ ಜರ್ ರೈಲು ಸಂಚಾರ ಪ್ರಾರಂಭಿಸುವ ಘೋಷಣೆ ಮೂಲಕ ಆನಂದ ಮೂಡಿಸಿದ್ದಾರೆ.
ಪ್ಯಾಸೆಂಜರ್ ರೈಲು ಗಾಡಿಗಳ ಸಂಚಾರ ಪ್ರಾರಂಭದಿಂದ ಉದ್ಯೋಗ ನಿಮಿತ್ತ ಬೆಂಗಳೂರಲ್ಲೇ ವಾಸವಿರುವವರು ಹುಟ್ಟೂರಿನ ಕಡೆ ಮುಖ ಮಾಡುವಂತೆ, ಮುಂದೆ ಬೆಂಗಳೂರಿಗೆ ವಾಸ ಬದಲಿಸಬೇಕೆನ್ನುವ ಆಲೋಚನೆಯಲ್ಲಿದ್ದವರಲ್ಲಿ ನಿಲುವು ಬದಲಿಸುವಂತೆಯೂ ಮಾಡಿದೆ.
ದಟ್ಟಣೆಗೂ ಬ್ರೇಕ್: ಬೆಳಗ್ಗೆ ಮತ್ತು ಸಂಜೆ ಸಂಚಾರದ ರೈಲು ಗಾಡಿಗಳಲ್ಲಿ ನಿಲ್ಲಲು ಜಾಗವಿರದು. ಉಳಿದ ರೈಲುಗಳ ಸಂಚಾರ ಅಕಾಲಿಕ. ಹೀಗಾಗಿ ಈ ಭಾಗದ ಬಹುಪಾಲು ಜನರು ರಾಜ್ಯ ರಾಜಧಾನಿಗೆ ತೆರಳಲು ಬಸ್, ಬಾಡಿಗೆ ಇಲ್ಲವೇ ಸ್ವಂತ ವಾಹನಗಳನ್ನೇ ಅವಲಂಬಿಸುವ ಸ್ಥಿತಿ  ಎದುರಾಗಿತ್ತು.
ಹೊಸದಾಗಿ ಸಂಚರಿಸುವ ರೈಲು ಗಾಡಿಗಳು ಪ್ರತಿ 30 ನಿಮಿಷದಿಂದ 1 ಗಂಟೆ ಅಂತರದಲ್ಲಿ ಸಂಚರಿಸುವಂತಾದರೆ ಭಾಗಶಃ ಪ್ರಯಾಣಿಕರು ರೈಲುಗಳತ್ತ ಸಹಜವಾಗಿಯೇ ಮುಖ ಮಾಡುವುದರಲ್ಲಿ ಸಂದೇಹವಿಲ್ಲ. ಆಗ ಸಹಜವಾಗಿಯೇ ಹೆದ್ದಾರಿಯಲ್ಲಿ ವಾಹನ ದಟ್ಟಣೆಯೂ ಕೊಂಚ ತಗ್ತುತ್ತದೆ.
ವಿಸ್ತರಣೆಯ ಬೇಡಿಕೆ: ಬೆಂಗಳೂರು-ರಾಮನಗರ ನಡುವಿನ ಹೊಸ ಪ್ಯಾಸೆಂಜರ್ ರೈಲು ಸಂಚಾರವನ್ನು ನೆರೆಯ ಚನ್ನಪಟ್ಟಣಕ್ಕೆ ವಿಸ್ತರಿಸಿದರೆ ಸೂಕ್ತವೆನ್ನುವ ಬೇಡಿಕೆ ಈಗಾಗಲೇ ವ್ಯಕ್ತವಾಗುತ್ತಿದೆ. ಈ ವಿಷಯದಲ್ಲಿ ಸದಾನಂದಗೌಡ ಅವರಿಗೆ ಸ್ಥಳೀಯ ಸಂಸದರು ಸಮಾಲೋಚನೆ ನಡೆಸಬೇಕಿದೆ.
ರಾಮನಗರಕ್ಕೆ ಹೋಲಿಸಿದರೆ ರೈಲುಗಳಲ್ಲಿ ಪ್ರಯಾಣಿಸುವ ಉದ್ಯೋಗಿಗಳು ಮತ್ತು ಪ್ರಯಾಣಿಕರು ಚನ್ನಪಟ್ಟಣದಲ್ಲೇ ಅಧಿಕ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಮನಗರಕ್ಕಿಂತ ಮಾಸಿಕ ಪಾಸುಗಳನ್ನು ಹೊಂದಿದ ಪ್ರಯಾಣಿಕರು ಚನ್ನಪಟ್ಟಣದಲ್ಲೇ ಹೆಚ್ಚಾಗಿದ್ದಾರೆ. ಹೀಗಾಗಿ ವಿಸ್ತರಣೆ ಅಗತ್ಯವಿದೆ.
 


ಜಿಲ್ಲೆಗೆ ಇನ್ನಷ್ಟು ಕೊಡುಗೆ
ಈ ಬಾರಿಯ ಆಯವ್ಯಯದಲ್ಲಿ ಹೊಸ ರೈಲು ಮಾರ್ಗಗಳ ಸ್ಥಾಪನೆಗೆ ಒತ್ತು ನೀಡಿರುವುದರಲ್ಲಿ ಬೆಂಗಳೂರು-ಚಾಮರಾಜನಗರ ಮಾರ್ಗವೂ ಸೇರಿದೆ. ಇದು ರಾಮನಗರ ಜಿಲ್ಲೆಯ ಕನಕಪುರ ಮಾರ್ಗವಾಗಿ ಹಾದು ಹೋಗಿರುವುದರಿಂದ ಈ ಜಿಲ್ಲೆಗೆ ಮತ್ತೊಂದು ಕೊಡುಗೆ ಸಿಕ್ಕಂತಾಗಿದೆ.
ಹೇಗೂ ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗ ಅಂತಿಮ ಹಂತಕ್ಕೆ ಬಂದಿದೆ. ಬೆಂಗಳೂರಿನಿಂದ ರಾಮನಗರ ಜಿಲ್ಲೆಯ ಗಡಿ ನಿಲ್ದಾಣವಾದ ಶೆಟ್ಟಿಹಳ್ಳಿವರೆಗೆ ಪೂರ್ಣಗೊಂಡು, ಉಭಯ ಮಾರ್ಗಗಳಲ್ಲೂ ರೈಲು ಸಂಚಾರ ನಡೆಯುತ್ತಿದೆ.
ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಮಂಗಳ ಎಕ್ಸ್ಪ್ರೆಸ್, ಅಜ್ಮೀರ್-ಮೈಸೂರು ರೈಲು ನಿಲುಗಡೆ ನೀಡಲಾಗಿದೆ. ನೆರೆಯ ಮಂಡ್ಯದಲ್ಲಿ ನಿಲುಗಡೆ ನೀಡುವ ಇನ್ನಷ್ಟು ರೈಲು ಗಾಡಿಗಳು ರಾಮನಗರದಲ್ಲಿ ನಿಲ್ಲುತ್ತಿಲ್ಲ. ಮಂಡ್ಯದಂತೆಯೇ ರಾಮನಗರವೂ ಜಿಲ್ಲಾ ಕೇಂದ್ರವಾಗಿದೆ.  
ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು, ಚಾಮುಂಡಿ ಸಹಿತ ಮಂಡ್ಯದಲ್ಲಿ ನಿಲುಗಡೆ ನೀಡುವ ಎಲ್ಲ ರೈಲು ಗಾಡಿಗಳಿಗೂ ರಾಮನಗರದಲ್ಲೂ ನಿಲುಗಡೆ ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸದಾನಂದಗೌಡ ರು ಗಮನ ಹರಿಸಬೇಕೆನ್ನುವುದು ಇಲ್ಲಿನ ಜನರ ಆಗ್ರಹ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್