ಬೆಂಗಳೂರು ಗ್ರಾಮಾಂತರ

ನೋಂದಣಿ ತಡೆಯುವಂತೆ ಪತ್ರ

-ಮತ್ತೀಕೆರೆ ಜಯರಾಮ್
ರಾಮನಗರ: ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ನೀಡಲಾಗುವ ನಮೂನೆ 3 ಆಧರಿಸಿ ನಿವೇಶನ ಇಲ್ಲವೇ ಕಟ್ಟಡದ ಕ್ರಯ, ಭೋಗ್ಯ, ಆಧಾರದ ಪತ್ರಗಳ ನೋಂದಣಿ ತಡೆಯುವಂತೆ ನಗರಸಭೆ ಆಯುಕ್ತ ಯಶವಂತ್ ಅವರು ಉಪ ನೋಂದಣಾಧಿಕಾರಿಗೆ ಪತ್ರ ರವಾನಿಸಿದ್ದಾರೆ.
ಉಲ್ಲೇಖ ಸಂಖ್ಯೆ ನಸರಾ-ಎಂಯುಎನ್ 1ಸಿಆರ್3-2013ರ ಆಧರಿಸಿ ಜು.3ರಂದು ನಗರಸಭೆ ಆಯುಕ್ತರಿಂದ ರವಾನೆಯಾಗಿರುವ ಪತ್ರವು ರಾಮನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜು.4ಕ್ಕೆ ಸ್ವೀಕೃತವಾಗಿದ್ದು, ಮಾಹಿತಿಗಾಗಿ ಪ್ರತಿಯನ್ನು ಜಿಲ್ಲಾಧಿಕಾರಿಗೂ ಕಳುಹಿಸಲಾಗಿದೆ.
ರಾಮನಗರ ನಗರಸಭೆಯಲ್ಲಿ ಅನಧಿಕೃತ ಬಡಾವಣೆಗಳು ಮತ್ತು ಅಕ್ರಮ ಖಾತೆಗಳ ಹಾವಳಿ ಹೆಚ್ಚಿರುವ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ತೆರಿಗೆ ಪಾವತಿಯ ನಮೂನೆ 3 ಆಧರಿಸಿ ಸ್ಥಿರಾಸ್ತಿ ನೋಂದಣಿಯಿಂದ ಹೆಚ್ಚು ಅವಾಂತರವಾಗುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಪತ್ರ ರವಾನಿಸಲಾಗಿದೆ.
ಕಂದಾಯ ಸ್ವೀಕೃತಿಯಷ್ಟೇ: ನಮೂನೆ 3 ಯಾವುದೇ ಸ್ವತ್ತಿನ ತೆರಿಗೆ ಪಾವತಿಯ ರಶೀದಿಯೇ ಹೊರತು ಆಸ್ತಿಗೆ ಸಂಬಂಧಿಸಿದ ಮಾಲೀಕತ್ವದ ಹಕ್ಕನ್ನು ದೃಢೀಕರಿಸುವುದಿಲ್ಲ. ಇಷ್ಟಾಗಿಯೂ ನಮೂನೆ 3 ಆಧರಿಸಿ ಸಹಸ್ರಾರು ನಿವೇಶನಗಳ ಮಾರಾಟ ನೋಂದಣಿ ಆಗಿರುವುದು ಬಯಲಾಗಿದೆ. ಇಂತಹ ಪ್ರಕರಣಗಳಲ್ಲಿ ಕರಾಬು, ಗೋಮಾಳ ಸೇರಿದಂತೆ ಸರ್ಕಾರಿ ಜಮೀನಿನ ಕ್ರಯ ಆಗಿರುವ ನಿದರ್ಶನಗಳು ಸಾಕಷ್ಟಿವೆ. ಈ ಸ್ವತ್ತುಗಳನ್ನು ಮಾರಾಟ ಮಾಡಿದವರು ಹಣ ಜೇಬಿಗಿಳಿಸಿಕೊಂಡರೆ, ಖರೀದಿದಾರಿಗೆ ಪಂಗನಾಮ ಬಿದ್ದಿರುವುದೂ ಉಂಟು.
ಉರುಳು: ನಮೂನೆ 3 ಆಧರಿಸಿ ನೋಂದಣಿ ಮಾಡದಂತೆ ಈ ಹಿಂದೆಯೂ ನಗರಸಭೆಯಿಂದ ಹಿಂದೆಯೂ ಮೂರ್ನಾಲ್ಕು ಬಾರಿ ಪತ್ರ ರವಾನೆಯಾಗಿದ್ದರೂ ಉಪ ನೋಂದಣಾಧಿಕಾರಿಯು ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಇದೀಗ ಬೋಗಸ್ ಖಾತಾ ಹಗರಣ ಉಪ ನೋಂದಣಾಧಿಕಾರಿಗೂ ಉರುಳಾಗಿದೆ.
ತಡವಾಗಿ ಎಚ್ಚೆತ್ತರು: ರಾಜಕೀಯ ಒತ್ತಡ, ಲಾಬಿ, ಲಂಚದಾಹದಿಂದ ನಮೂನೆ 3 ಆಧರಿಸಿ ಸ್ವತ್ತಿನ ನೋಂದಣಿಯ ನಿಯಮ ಬಾಹಿರ ಕ್ರಮ ಅನುಸರಿಸಿಕೊಂಡು ಬಂದಿದ್ದ ಉಪ ನೋಂದಣಾಧಿಕಾರಿ ತಡವಾಗಿಯಾದರೂ ಎಚ್ಚೆತ್ತಿದ್ದಾರೆ. ಇದೀಗ ಅಂತಹ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ.
ರಾಮನಗರದಲ್ಲಿ ಅಕ್ರಮ ಖಾತೆ ಹಾವಳಿ ಹೆಚ್ಚಿರುವ ಬಗ್ಗೆ ಪುರಪಿತೃಗಳ ದೂರಿನ ಮೇರೆಗೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತನಿಖೆಗೆ ಆದೇಶಿಸುತ್ತಿದ್ದಂತೆಯೇ ಭೂ ಮಾಫಿಯಾ, ಏಜೆಂಟರು, ನಗರಸಭೆ ಮತ್ತು ಉಪನೋಂದಣಾಧಿಕಾರಿ ಕಚೇರಿಯ ಭ್ರಷ್ಟ ಸಿಬ್ಬಂದಿಗೂ ಭೀತಿ ಪ್ರಾರಂಭವಾಗಿದೆ.  ತನಿಖೆಯನ್ನು ಹಳ್ಳ ಹಿಡಿಸಲು ಅಧಿಕಾರಸ್ಥ ರಾಜಕಾರಣಿಗಳು ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ನಗರಸಭೆ ಆಯುಕ್ತ ಯಶವಂತ್ ಹಗರಣದ ಉದ್ದ, ಆಳವನ್ನು ಅರಿತು ತನಿಖಾ ವರದಿಯಲ್ಲಿ ಅಕ್ರಮವನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ.
ರಾಡಿ ಎರೆಚಾಟ: ಅಕ್ರಮ ಖಾತೆ ಹಗರಣವು ನಗರಸಭೆಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪುರಪಿತೃಗಳಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ತನಿಖಾ ವರದಿ ಜಿಲ್ಲಾಧಿಕಾರಿ ಕೈ ಸೇರುವ ಮುನ್ನವೇ ಪುರಪಿತೃಗಳು ರಾಡಿ ಎರೆಚಾಟದಲ್ಲಿ ನಿರತರಾಗಿದ್ದು, ಪರಸ್ಪರರ ಭ್ರಷ್ಟಾಚಾರವನ್ನು ಬಯಲು ಮಾಡಲು ಹೊರಟಿದ್ದಾರೆ. ಈ ಮಧ್ಯೆ, ನಗರಸಭೆ ಆಡಳಿತ ಚುಕ್ಕಾಣಿ ಹಿಡಿದವರೇ ಅಕ್ರಮ ಖಾತೆ ಹಗರಣದಲ್ಲಿ ಭಾಗಿಯಾಗಿರುವ ಶಂಕೆಯೂ ದಟ್ಟವಾಗಿದೆ. ಈ ಕುರಿತಂತೆ ಮಾಹಿತಿ ಹಕ್ಕು ಅಧಿನಿಯಮದಡಿ ಕೆಲವರು ಅರ್ಜಿ ಸಲ್ಲಿಸಿ, ಈಗಾಗಲೇ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ದಾಖಲೆ ಒದಗಿಸಿದ್ದಾರೆನ್ನುವ ಕಾರಣಕ್ಕೆ ಆಯುಕ್ತರ ಮೇಲೆ ಅಧಿಕಾರಸ್ಥರು ಕೆಂಗಣ್ಣು ಬೀರಿದ್ದೂ ಉಂಟು.

ಎತ್ತಂಗಡಿಯ ಷಡ್ಯಂತ್ರ
ಅಕ್ರಮ ಖಾತೆಗಳ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಆಯುಕ್ತ ಯಶವಂತ್ ಎತ್ತಂಗಡಿಗೆ ಷಡ್ಯಂತ್ರ ಮುಂದುವರೆದಿದೆ. ಒಂದೊಮ್ಮೆ ಸರ್ಕಾರ ಅದಕ್ಕೆ ಆಸ್ಪದ ನೀಡಿದ್ದೇ ಆದರೆ ರಾಮನಗರ ನಗರಸಭೆಯ ಹಗರಣಗಳೆಲ್ಲ ಮುಚ್ಚಿ ಹೋಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯಶವಂತ್ ಅವರನ್ನು ತಕ್ಷಣ ವರ್ಗಗೊಳಿಸಬೇಕೆಂದು ಈಗಾಗಲೇ ನಾಲ್ಕಾರು ಶಿಫಾರಸು ಪತ್ರಗಳು ಪೌರಾಡಳಿತ ಇಲಾಖೆ ಸಚಿವರಿಗೆ ರವಾನೆ ಆಗಿವೆ. ತನಿಖೆಗೆ ಆದೇಶಿಸಿದ ಜಿಲ್ಲಾಧಿಕಾರಿ ಜಮಾದಾರ್ ಅವರು ತನಿಖೆಯ ಪ್ರಗತಿ, ಅದಕ್ಕಿರುವ ಅಡೆತಡೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ.

ಮತ್ತೊಂದು ವಿವಾದ
ನಿವೇಶನ ಸಂಖ್ಯೆ 58-14-2872ಕ್ಕೆ ಸಂಬಂಧಿಸಿದಂತೆ ಆಗಿರುವ ಖಾತೆಯಲ್ಲಿ ಹಾಲಿ ಆಯುಕ್ತ ಯಶವಂತ್ ಅಧಿಕಾರಾವಧಿಯ ದಿನಾಂಕವೇ ನಮೂದಾಗಿದೆ. ಆದರೆ, ಖಾತೆ ಮಾಡಿಕೊಡಲಾಗಿದ್ದಕ್ಕೆ ಸಹಿ ಹಾಕಿರುವವರು ಹಿಂದಿನ ಆಯುಕ್ತ ಸಿದ್ದರಾಜು. ಖಾತೆ ಆದ ದಿನಾಂಕಕ್ಕೂ ಮುನ್ನವೇ ತೆರಿಗೆ ಪಾವತಿಯ ನಮೂನೆ 3 ವಿತರಣೆ ಆಗಿದೆ. ಸಿಬ್ಬಂದಿ ಎಸಗಿರುವ ಈ ಕೈಚಳಕಕ್ಕೆ ಸ್ವತಃ ಯಶವಂತ್ ಹೌಹಾರಿದ್ದಾರೆ. ಇಂತಹ ಹತ್ತಾರು ಪ್ರಕರಣಗಳು ತನಿಖಾ ಹಂತದಲ್ಲಿ ಪತ್ತೆಯಾಗಿವೆ. ಹೀಗೆ ಸಾಕಷ್ಟು ಅಕ್ರಮಗಳು ಒಂದೊಂದಾಗಿ ಹೊರ ಬರುತ್ತಿರುವ ಹಿನ್ನೆಲೆಯಲ್ಲಿ  ತನಿಖಾ ವರದಿ ಸಲ್ಲಿಕೆ ವಿಳಂಬ ಆಗುತ್ತಿದೆ. ಕೆದಕುತ್ತಾ ಹೋದರೆ ನಗರಸಭೆಯ ಮತ್ತಷ್ಟು ಕರ್ಮಕಾಂಡಗಳು ಬಯಲಾಗುವ ಸಂಭವವಿದೆ.

ಡಿಸಿ ಅಂಗಳಕ್ಕೆ ವಿವಾದ
ಕೆಲ ಖಾತೆಗಳ ವಿವರವನ್ನು ಮಾಹಿತಿ ಹಕ್ಕು ಅರ್ಜಿಯಡಿ ವಿತರಿಸಿದ ಹಿನ್ನೆಲೆಯಲ್ಲಿ ಆಯುಕ್ತ ಯಶವಂತ್ ಮೇಲೆ ಗೂಬೆ ಕೂರಿಸುವ ಷಡ್ಯಂತ್ರವೂ ನಡೆದಿದೆ. ಆಯುಕ್ತರು ಹಾಜರಿ ಪುಸ್ತಕಕ್ಕೆ ಸಹಿ ಹಾಕದಿರುವುದನ್ನೇ ಮುಂದಿಟ್ಟುಕೊಂಡು ಖುದ್ದು ನಗರಸಭೆ ಅಧ್ಯಕ್ಷರೇ ಜಿಲ್ಲಾಧಿಕಾರಿ ಬಳಿ ದೂರು ಹೊತ್ತೊಯ್ದ ಘಟನೆ ಮಂಗಳವಾರ ನಡೆದಿದೆ. ಹಾಜರಿ ಪುಸ್ತಕವನ್ನು ಜಿಲ್ಲಾಧಿಕಾರಿ ಮುಂದೆ ಹಾಜರುಪಡಿಸಿ ವಿವಾದವೆಬ್ಬಿಸುವ ನಿಟ್ಟಿನಲ್ಲಿ ಪುರಪಿತೃಗಳ ಒಂದು ಬಣ ನಡೆಸಿದ ಪ್ರಯತ್ನ ಫಲಿಸದಾಗಿದೆ. ಅಲ್ಲಿಂದ ಹಿಂತಿರುಗಿದ ನಂತರ ನಗರಸಭೆಯಲ್ಲಿ ಅಧಿಕಾರಸ್ಥರು ಸಿಬ್ಬಂದಿ ಮೇಲೆ ಕೂಗಾಡಿ, ರೇಗಾಡಿ ಕಡತ ಎಸೆದು ರಂಪಾಟ ಮಾಡಿರುವುದು ಜಗಜ್ಜಾಹೀರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ