ಬೆಂಗಳೂರು ಗ್ರಾಮಾಂತರ

ಪ್ರಸ್ತಾಪವಾಗದ ಅಕ್ರಮ ಮೂಡಿದ ಅನುಮಾನ

ರಾಮನಗರ: ಇಲ್ಲಿನ ನಗರಸಭೆಯಲ್ಲಿ ನಡೆದಿರುವ ಅಕ್ರಮ ಖಾತೆ ಕರ್ಮಕಾಂಡಕ್ಕೆ ಸಂಬಂಧಿಸಿದ ಪ್ರಾಥಮಿಕ ಹಂತದ ತನಿಖಾ ವರದಿಯಲ್ಲಿ ನಗರದ ಪ್ರಥಮ ಪ್ರಜೆಯೂ ಸೇರಿದಂತೆ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಅಕ್ರಮಗಳು ಪ್ರಸ್ತಾಪವಾಗದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿದೆ.
ಹಾಲಿ ಅಧ್ಯಕ್ಷ ಆರೀಫ್ ಖುರೇಷಿ ಅವರ ಸ್ವಂತ ನಿವೇಶನಗಳಿಗೇ ಅಕ್ರಮ ಖಾತೆ ಆಗಿರುವ ಬಗ್ಗೆ ತನಿಖಾಧಿಕಾರಿಯೂ ಆಗಿರುವ ಆಯುಕ್ತ ಯಶವಂತ ಕುಮಾರ್ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿಯೊಂದಕ್ಕೆ ದಾಖಲೆ ಸಮೇತ ಸಮಜಾಯಿಷಿ ನೀಡಿದ್ದಾರೆ. ಇಷ್ಟಾಗಿಯೂ ತಾವೇ ಸಲ್ಲಿಸಿದ ವರದಿಯಲ್ಲಿ ಅದನ್ನು ದಾಖಲಿಸಿಲ್ಲ.
ಹೇಳಿ ಕೇಳಿ ಆಯುಕ್ತರು ಅಧ್ಯಕ್ಷ ಮತ್ತು ಚುನಾಯಿತ ಪ್ರತಿನಿಧಿಗಳ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಯಾಗಿದ್ದಾರೆ. ಹೀಗಾಗಿ ಅವರು ಹೆದರಿಯೋ ಅಥವಾ ಒತ್ತಡಕ್ಕೆ ಮಣಿದೋ ಪ್ರಭಾವಿಗಳ ಅಕ್ರಮ ಖಾತೆಗಳನ್ನು ಕೈಬಿಟ್ಟರಬಹುದೇ. ಇವೆರಡೂ ಅಲ್ಲದೆ ಬೇರೇನಾದರೂ ತಂತ್ರಗಾರಿಕೆ ಇದೆಯೇ ಎನ್ನುವುದು ನಿಗೂಢವಾಗಿದೆ.  
ಶೈಲಜಾಗೆ ಸವಾಲು: ರಾಮನಗರ ನಗರಸಭೆಯಲ್ಲಿ ಆಸ್ತಿ ತೆರಿಗೆ ಮತ್ತು ಖಾತೆಗಳಿಗೆ ಸಂಬಂಧಿಸಿದಂತೆ 280 ಕಡತಗಳಿವೆ. ಇದೀಗ ತನಿಖೆಯ ಹೊಣೆ ಹೊತ್ತಿರುವ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶೈಲಜಾ ಅವರು ಎಲ್ಲ ಕಡತಗಳನ್ನು ಪರಿಶೀಲಿಸಿ, ಅಕ್ರಮಗಳನ್ನು ಬಯಲಿಗೆ ಎಳೆಯುವುದು ಸವಾಲಿನ ಕೆಲಸವೇ ಸರಿ.  ಯಶವಂತ ಕುಮಾರ್ ಅವರ ಪ್ರಾಥಮಿಕ ಹಂತದ ತನಿಖಾ ವರದಿಯಲ್ಲಿ ಹಗರಣದ ಸ್ಯಾಂಪಲ್‌ಗಳನ್ನು ಮಾತ್ರವೇ ನೀಡಿದ್ದಾರೆ. ಸಮಗ್ರ ವರದಿ ಸಲ್ಲಿಸುವುದು ಶೈಲಜಾ ಕರ್ತವ್ಯವಾಗಿದೆ. ಅದಕ್ಕೆ ಪೂರಕವಾಗಿ ಅವರಿಗೆ ಕಂದಾಯ ಮತ್ತು ಪೌರಾಡಳಿತ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಅಗತ್ಯ ಸಿಬ್ಬಂದಿಯನ್ನು ಒದಗಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕಿದೆ.
ನಕಲಿ ಸಹಿ ಹಾವಳಿ: ಖಾತಾ ಅಕ್ರಮಗಳಿಗೆ ನೆರವಾಗುತ್ತಾ ಬಂದಿರುವ ಕೆಲ ಸಿಬ್ಬಂದಿ ಕೈಚಳಕ ಬಲು ಜೋರಾಗಿಯೇ ಇದೆ. ತಮ್ಮದಲ್ಲದ ವ್ಯಾಪ್ತಿಗೆ ಸೇರಿದ ವಾರ್ಡ್ ಇಲ್ಲವೇ ಪ್ರದೇಶದ ನಿವೇಶನಗಳಿಗೂ ಅಕ್ರಮ ಖಾತೆಗಳನ್ನು ಎಗ್ಗಿಲ್ಲದೆ ಮಾಡಿಕೊಡುತ್ತಿದ್ದಾರೆ. ಹೀಗೆ ಮಾಡುವಾಗ ಸಹೋದ್ಯೋಗಿಗೆ ತಿಳಿಯದಂತೆ ಆತನ ಸಹಿಯನ್ನೇ ನಕಲು ಮಾಡಿರುವ ನಿದರ್ಶನಗಳು ಸಾಕಷ್ಟಿವೆ.
ನಗರಸಭೆಯಲ್ಲಿ ಅಕ್ರಮ ಖಾತೆಗಳುಳ್ಳ ನಿವೇಶನಗಳ ಸಂಖ್ಯೆ 1500ಕ್ಕೂ ಅಧಿಕ. ಈ ಪೈಕಿ ಸಿಂಹಪಾಲು ಖಾತೆಗಳಿಗೆ ಹಿಂದಿನ ಆಯುಕ್ತ ಸಿದ್ದರಾಜು ಸಹಿ ಇದೆ. ಅದರಲ್ಲಿ ಅರ್ಧದಷ್ಟು ಸಿದ್ದರಾಜು ಅವರ ಅಸಲಿ ಸಹಿಯೇ ಆಗಿದ್ದರೆ, ಉಳಿದರ್ಧ ಸಹಿಗಳು ಫೋರ್ಜರಿ ಎನ್ನಲಾಗುತ್ತಿದೆ. ಇದೆಲ್ಲದರ ಪತ್ತೆಗೆ ವಿಧಿ ವಿಜ್ಞಾನ ಪ್ರಯೋಗಾಲಯ ಪರೀಕ್ಷೆ ಅಗತ್ಯವಾಗಿದೆ.
ಇನ್ನೂ ನಿಲ್ಲದ ಒತ್ತಡ
ಅಕ್ರಮ ಖಾತೆಗಳ ಹಗರಣದಲ್ಲಿ ಪಕ್ಷಾತೀತವಾಗಿ ಪ್ರಭಾವಿ ಮುಖಂಡರಿದ್ದಾರೆ. ಅವರೆಲ್ಲ ಹೇಗಾದರೂ ಮಾಡಿ ಅಕ್ರಮವನ್ನೆಲ್ಲಾ ಸಕ್ರಮ ಮಾಡಿಕೊಳ್ಳಬೇಕೆಂದು ಶಾಸಕ, ಸಂಸದ ಮತ್ತು ಸಚಿವರ ಬಳಿಗೆ ಎಡತಾಕುತ್ತಿದ್ದಾರೆ. ರಾಜಕೀಯ ಪ್ರಭಾವ ಬಳಸಿ ತನಿಖೆಯನ್ನು ಹಳ್ಳ ಹಿಡಿಸುವ ಷಡ್ಯಂತ್ರ ಮುಂದುವರೆದೇ ಇದೆ ಎನ್ನಲಾಗಿದೆ.  ಬಂದ ಹೊಸತರಲ್ಲಿ ಜಿಲ್ಲಾಧಿಕಾರಿ ಜಮಾದಾರ್ ಅವರು ಹಿಂದು ಮುಂದು ನೋಡದೆ ತನಿಖೆಗೆ ಆದೇಶಿಸಿದ್ದಾರೆ. ಒಂದು ವೇಳೆ ತನಿಖೆಯೇನಾದರೂ ಹಾದಿ ತಪ್ಪಿದರೆ ಅಥವಾ ಅಕ್ರಮಗಳ ಸಕ್ರಮೀಕರಣಕ್ಕೆ ದಾರಿ ಮಾಡಿಕೊಟ್ಟರೆ ಸ್ವತಃ ಅವರೇ ಅಪಖ್ಯಾತಿಗೆ ಗುರಿಯಾಗುತ್ತಾರೆ. ಹಗರಣವನ್ನು ಹಳ್ಳ ಹಿಡಿಸಲು ಉನ್ನತ ಅಧಿಕಾರಿಗಳನ್ನೇ ಎತ್ತಂಗಡಿ ಮಾಡುವ ಸಂಚನ್ನೂ ಅಲ್ಲಗಳೆಯುವಂತಿಲ್ಲ.
ನಿವೃತ್ತಿ ನಂತರವೂ ಸಹಿ
ನಗರಸಭೆಯ ಹಿಂದಿನ ಆಯುಕ್ತ ಸಿದ್ದರಾಜು ಅವರು 2012ರ ಜೂ.30ರಂದೇ ನಿವೃತ್ತರಾಗಿದ್ದಾರೆ. ಆದರೆ, ವಾರ್ಡ್ ನಂ.14ರಲ್ಲಿ ವಿವಿಧ ಸರ್ವೆ ನಂಬರುಗಳಿಗೆ ಸೇರಿದ 21 ನಿವೇಶನಗಳಿಗೆ 2013ರ ಅಕ್ಟೋಬರ್ 24ಕ್ಕೆ ಸಿದ್ದರಾಜು ಸಹಿಯೊಂದಿಗೆ ಖಾತೆ ಆಗಿರುವುದು ಎಂಟನೇ ಅದ್ಭುತವೇ ಸರಿ.  ಸದರಿ ಸಹಿ ಅಸಲಿಯೋ ನಕಲಿಯೋ ಎನ್ನುವುದು ಎರಡನೇ ಪ್ರಶ್ನೆ. ಕಡತವಂತೂ ಸಿದ್ಧವಾಗುವುದು ನಗರಸಭೆ ಸಿಬ್ಬಂದಿಯಿಂದಲೇ. ಹೀಗಾಗಿ ವಾರ್ಡ್‌ವಾರು ವಿಷಯ ನಿರ್ವಾಹಕರು ಅಕ್ರಮ ಖಾತೆಗಳ ಕಡತದಲ್ಲಿ ಕೈಚಳಕ ತೋರಿರುವುದುನ್ನು ಅಲ್ಲಗಳೆಯುವಂತಿಲ್ಲ. ರಾಮನಗರ ನಗರಸಭೆಯಲ್ಲಿ ಆಗಿರುವ 1500ಕ್ಕೂ ಹೆಚ್ಚು ನಿವೇಶನಗಳ ಅಕ್ರಮ ಖಾತೆಗಳ ಪೈಕಿ ಬಹುಪಾಲು ಕಡತಗಳಲ್ಲಿ ಸಿದ್ದರಾಜು ಸಹಿಯೇ ರಾರಾಜಿಸುತ್ತಿದೆ. ನಿವೃತ್ತಿ ಅಂಚಿನಲ್ಲಿದ್ದಾಗ ಎಸಗಿ ಹೋದ ಅಕ್ರಮಕ್ಕೆ ಈಗ ಸಿದ್ದರಾಜು ಕಾನೂನು ಕುಣಿಕೆಗೆ ಸಿಲುಕುವಂತಾಗಿದೆ.
ಕೆಲಸವಿಲ್ಲದಾದ ದಲ್ಲಾಳಿಗಳು
ಅಕ್ರಮ ಖಾತೆಗಳನ್ನು ಮಾಡಿಸಿಕೊಡುವುದು, ಅಂತಹ ನಿವೇಶನಗಳ ಮಾರಾಟ ಸಂಬಂಧ ದಲ್ಲಾಳಿ ಕೆಲಸ ಮಾಡಿಕೊಂಡು ನೂರಾರು ಮಂದಿ ಜೇಬು ತುಂಬಿಸಿಕೊಳ್ಳುತ್ತಿದ್ದರು. ಯಾವಾಗ ಅಕ್ರಮ ಖಾತೆಗಳ ತನಿಖೆ ಪ್ರಾರಂಭಗೊಂಡು, ಬಣ್ಣ ಬಯಲಾಯಿತೋ ಅಲ್ಲಿಂದೀಚೆಗೆ ಕೆಲಸವಿಲ್ಲದಾದ ದಲ್ಲಾಳಿಗಳು ನೊಣ ಹೊಡೆಯುವಂತಾಗಿದೆ.  ಪ್ರತಿಯೊಂದು ಅಕ್ರಮ ಖಾತೆ ಮತ್ತು ಅಂತಹ ನಿವೇಶನದ ಮಾರಾಟದ ಪ್ರಕ್ರಿಯೆಯಲ್ಲಿ ದಲ್ಲಾಳಿ ಬಳಿಯೇ ಡೀಲ್ ಕುದುರಿಸಲಾಗುತ್ತದೆ. ಪ್ರತಿಯೊಂದು ಪ್ರಕರಣಕ್ಕೆ ಸರಾಸರಿ ರು.30 ರಿಂದ 40 ಸಾವಿರದಷ್ಟು ವಸೂಲಿ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ ಅರ್ಧದಷ್ಟು ಪಾಲು ನಗರಸಭೆ ಸಿಬ್ಬಂದಿಗಾದರೆ, ಉಳಿದರ್ಧ ದಲ್ಲಾಳಿಯ ಜೇಬು ಸೇರುತ್ತಿತ್ತು. ಸದ್ಯಕ್ಕೆ ಅದು ಬಂದ್ ಆಗಿದೆ.
ಕಡತ ವಶಪಡಿಸಿಕೊಂಡ ಶೈಲಜಾ
ಯಶವಂತ ಕುಮಾರ್ ಸಲ್ಲಿಸಿರುವ ಪ್ರಾಥಮಿಕ ಹಂತದ ತನಿಖಾ ವರದಿಯನ್ನಾಧರಿಸಿ ಅಕ್ರಮ ಖಾತೆಗಳ ಕರ್ಮಕಾಂಡದ ಬಗ್ಗೆ ಸಮಗ್ರ ತನಿಖೆಯ ಹೊಣೆ ವಹಿಸಿಕೊಂಡಿರುವ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶೈಲಜಾ ಅವರು ನಗರಸಭೆ ಕಚೇರಿಗೆ ತೆರಳಿ 240ಕ್ಕೂ ಹೆಚ್ಚು ಕಡತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಅಷ್ಟೂ ಕಡತಗಳನ್ನು ಆಯುಕ್ತ ಯಶವಂತ ಕುಮಾರ್ ಅವರ ಸುಪರ್ದಿಗೆ ವಹಿಸಲಾಗಿದೆ. ಕಾನೂನು ಬದ್ಧ ಖಾತೆಗಳ ವರ್ಗಾವಣೆ ಮತ್ತು ಆ ಖಾತೆಗಳಿಗೆ ಸಂಬಂಧಿಸಿದ ಇತರೆ ವ್ಯವಹಾರಗಳನ್ನು ಮಾತ್ರವೇ ಆಯುಕ್ತರು ನಿರ್ವಹಿಸಬೇಕಿದೆ. ಅದಕ್ಕೂ ತಮ್ಮ ಅನುಮೋದನೆ ಕಡ್ಡಾಯವೆನ್ನುವ ಷರತ್ತು  ನಿರ್ದೇಶನವನ್ನು ಶೈಲಜಾ ನೀಡಿದ್ದಾರೆ.
ಎಡವಟ್ಟಾದೀತು ಜೋಕೆ
ಅಕ್ರಮ ಖಾತೆಗಳ ನಿವೇಶನ ಖರೀದಿಸಿ ಸಾರ್ವಜನಿಕರು ಎಡವಟ್ಟು ಮಾಡಿಕೊಳ್ಳದಂತೆ ರಾಮನಗರ ನಗರಸಭೆಯಿಂದ 2013ರ ಡಿಸೆಂಬರ್ ಮಾಹೆಯಲ್ಲೇ ಪ್ರಕಟಣೆ ಹೊರಡಿಸಿ ಎಚ್ಚರಿಕೆ ನೀಡಲಾಗಿತ್ತು. ಇಷ್ಟಾಗಿಯೂ ಅಲ್ಲಿಂದೀಚೆಗೆ ಅಕ್ರಮ ಖಾತೆಯ ನೂರಾರು ನಿವೇಶನಗಳು ಖರೀದಿಯಾಗಿರುವುದು ವಿಪರ್ಯಾಸದ ಸಂಗತಿ.  ಪುರಸಭೆ ಕಾಯ್ದೆ ಪ್ರಕಾರ ಯಾವುದೇ ಆಸ್ತಿಗಳನ್ನು ದಾಖಲಿಸಲು ಭೂ ಪರಿವರ್ತನೆ ಮತ್ತು ಸಕ್ಷಮ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಅನುಮೋದನೆ ಕಡ್ಡಾಯ. ಇದನ್ನು ಉಲ್ಲಂಘಿಸಿ ರಚಿಸಿದ ಅನಧಿಕೃತ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿಸಿದರೆ ಅದಕ್ಕೆ ಯಾವ ಕಾರಣಕ್ಕೂ ಖಾತೆ ಮಾಡಿಕೊಡಲು ಸಾಧ್ಯವಿಲ್ಲ.  ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ನೀಡುವ ನಮೂನೆ 3ಕ್ಕೆ ಆಸ್ತಿ ಮೇಲಿನ ಹಕ್ಕುಗಳಿಗೆ ಸಂಬಂಧಿಸಿದಂತೆ ಅಧಿಕಾರವಿಲ್ಲ. ಇಷ್ಟಾಗಿಯೂ ನಮೂನೆ 3 ಆಧರಿಸಿ ನಿವೇಶನಗಳ ಖರೀದಿ ಮಾತ್ರ ನಿಂತಿಲ್ಲ. ಖರೀದಿಗೂ ಮುನ್ನ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿಚಾರಣೆ ಮಾಡಿಕೊಳ್ಳುವುದು ಸೂಕ್ತವಾಗಿದೆ.


-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ