ಬೆಂಗಳೂರು ಗ್ರಾಮಾಂತರ

ಮರಳು ಮಾಫಿಯಾ: ಡಿಸಿ ಶಸ್ತ್ರತ್ಯಾಗ

ಮತ್ತೀಕೆರೆ ಜಯರಾಮ್
ರಾಮನಗರ: ಈ ಜಿಲ್ಲೆಗೆ ಶಾಪವಾಗಿರುವ ಅಕ್ರಮ ಮರಳುಗಾರಿಕೆ ವಿಷಯದಲ್ಲಿ ಎಲ್ಲರಂತೆ ಇವರೂ ಬಂದ ಹೊಸತರಲ್ಲಿ ವೀರಾವೇಶದ ಮಾತುಗಳನ್ನೇ ಆಡಿದ್ದರು. ಮರಳು ಮಾಫಿಯಾ ಮಟ್ಟ ಹಾಕುವ ಸಂಕಲ್ಪವನ್ನೂ ತೊಟ್ಟರು. ಆದರೆ, ಈಗ ಆ ನಿಟ್ಟಿನಲ್ಲಿ ಇಟ್ಟ ಹೆಜ್ಜೆ ಗುರುತುಗಳೇ ಕಾಣುತ್ತಿಲ್ಲ ಹೀಗೆ, ಮಾತಿಗೂ ಕೃತಿಗೂ ತಾಳೆಯೇ ಇಲ್ಲದಂತಾದವರು ರಾಮನಗರ ನೂತನ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್. ಈ ಜಿಲ್ಲೆಯಲ್ಲಿ ಅವರ ದರ್ಬಾರ್ ಪ್ರಾರಂಭವಾಗಿ ತಿಂಗಳು ತುಂಬಿದೆ. ಸ್ವತಃ ಸಂಕಲ್ಪ ಮಾಡಿದ್ದಂತೆ ಅವರಿನ್ನೂ ಮರಳು ಮಾಫಿಯಾ ವಿರುದ್ಧ ಯುದ್ಧ ಪ್ರಾರಂಭಿಸಿಯೇ ಇಲ್ಲ.

ನಡೆಯದ ಕಾರ್ಯಾಚರಣೆ
ಚೊಚ್ಚಲ ದಾಳಿಯಲ್ಲಿ ಬೆಟ್ಟ ಅಗೆದು ಇಲಿ ಹಿಡಿದಂತಾದ ಜಿಲ್ಲಾಧಿಕಾರಿ ಜಮಾದಾರ್ ಶೀಘ್ರವೇ ಮರಳು ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ, ಅಕ್ರಮ ಮರಳುಗಾರಿಕೆ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುವುದಾಗಿ ವೀರಾವೇಶದ ಮಾತುಗಳನ್ನಾಡಿದ್ದರು. ಅಲ್ಲಿಂದ ಇಲ್ಲಿವರೆಗೆ ಅವರು ಸಭೆ ನಡೆಸಿ, ಕಾರ್ಯಾಚರಣೆ ಪ್ರಾರಂಭಿಸುವ ಮಾತು ಹಾಗಿರಲಿ. ಕಡೇಪಕ್ಷ ಸರ್ಕಾರವೇ ಹೊರಡಿಸಿರುವ ನಿಷೇಧಾಜ್ಞೆ ಉಲ್ಲಂಘಿಸಿ ಎಲ್ಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿದೆಯೋ ಅಲ್ಲಿಗೆ ಭೇಟಿ ನೀಡಿ ನೈಜ ಪರಿಸ್ಥಿತಿ ಪರಾಮರ್ಶೆ ಗೋಜಿಗೂ ಹೋಗಿಲ್ಲ.

ದಿಟ್ಟ ಹೆಜ್ಜೆ ಇಡಬೇಕಿದೆ
ರಾಮನಗರ ಜಿಲ್ಲೆಯ ಮರಳು ಮಾಫಿಯಾಕ್ಕೆ ಪಕ್ಷಾತೀತವಾಗಿ ರಾಜಕಾರಣಿಗಳ ಕೃಪಾಶೀರ್ವಾದವೂ ಇದೆ. ಇದು ಸಹಜವಾಗಿಯೇ ಜಿಲ್ಲಾಧಿಕಾರಿಗೆ ಅದರಲ್ಲೂ ರಾಜಕಾರಣಿಗಳ ಮಾತಿಗೆ ಮನ್ನಣೆ ನೀಡುವಂತಹ ಅಧಿಕಾರಿಗಳಿಗೆ ಬಿಸಿ ತುಪ್ಪವೇ ಸರಿ.  ಈ ಜಿಲ್ಲೆಯಲ್ಲಿ ತಮ್ಮ ಸಾಕ್ಷಿಗುಡ್ಡೆ ಬಿಟ್ಟು ಹೋಗಬೇಕೆನ್ನುವ ಇಚ್ಛಾಶಕ್ತಿ ಇರುವುದೇ ನಿಜವಾದರೆ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಂತಹ ಒತ್ತಡ ಬಂದರೂ ಹಿಂದೆ ಸರಿಯದೆ, ದಿಟ್ಟ ಹೆಜ್ಜೆ ಇಡುವ ನಿಟ್ಟಿನಲ್ಲಿ ಜಮಾದಾರ್ ಮುಂದಾಗಬೇಕಿದೆ.

ದಾರಿ ತಪ್ಪಿದ್ದರು ಡಿಸಿ
ಜಿಲ್ಲೆಯ ಉದ್ದಗಲವನ್ನು ಅರಿಯುವ ಮೊದಲೇ ಜಮಾದಾರ್ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ್ದರು. ದಾರಿ ತಪ್ಪಿದ್ದ ಅವರು ಸ್ಥಳ ಮುಟ್ಟುವಷ್ಟರಲ್ಲಾಗಲೇ ದಂಧೆಕೋರರು ಕಾಲು ಕಿತ್ತಿದ್ದರು. ಕೆಟ್ಟು ನಿಂತ ಜೆಸಿಬಿ ವಶಕ್ಕೆ ಪಡೆದು, ಬಂದ ದಾರಿಗೆ ಸುಂಕವಿಲ್ಲದಂತೆ ಜಿಲ್ಲಾಧಿಕಾರಿ ತಂಡ ಮರಳಿತ್ತು.  ಅಷ್ಟಕ್ಕೂ ಜಿಲ್ಲಾಧಿಕಾರಿ ನಡೆಸಿದ ದಿಢೀರ್ ಭೇಟಿ ಸ್ವಯಂ ಪ್ರೇರಿತವಂತೂ ಅಲ್ಲ. ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಯಲು ಗಡುವು ವಿಧಿಸಿ ಕನ್ನಡಪರ ಸಂಘಟನೆಯೊಂದು ನೀಡಿದ ಮನವಿ ಪತ್ರ ಆ ದಾಳಿಗೆ ಪ್ರೇರಣೆಯಾಗಿತ್ತಷ್ಟೇ. ದಾಳಿ ಮಾಹಿತಿಯನ್ನು ಪೊಲೀಸ್, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆಗೆ ಜಿಲ್ಲಾಧಿಕಾರಿ ರವಾನಿಸಿದ್ದರು. ಅಧೀನ ಅಧಿಕಾರಿಗಳೇ ಮರಳು ಮಾಫಿಯಾಕ್ಕೆ ದಾಳಿ ಸುಳಿವನ್ನಿತ್ತು, ಜಿಲ್ಲಾಧಿಕಾರಿಯನ್ನು ಕೊಂಕಣ ಸುತ್ತಿಸಿ ಮೈಲಾರಕ್ಕೆ ಕರೆದೊಯ್ದಿದ್ದು ಹಳೆಯ ಸಂಗತಿ.
ಜನರ ಸಹಕಾರವೂ ಬೇಕು
ಮರಳು ಲೂಟಿಯಾಗಿ ಪ್ರಕೃತಿ ವಿಕೋಪ ಎದುರಾಗುತ್ತಿದೆ ಎಂದು ಬೊಬ್ಬೆಯಿಡುವ ಬದಲು ಪರಿಸರ ವಾದಿಗಳು, ಜನಪರ ಸಂಘಟನೆಗಳು ಮತ್ತು ಸಾರ್ವಜನಿಕರೂ ಅಧಿಕಾರಿಗಳಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾಳಜಿ ಮೆರೆಯಲು ಮುಂದಾಗುವುದು ಅಗತ್ಯವಾಗಿದೆ.  ಅಕ್ರಮ ಮರಳುಗಾರಿಕೆ ವಿರುದ್ಧ ಕೈಗೊಳ್ಳುವ ಕಾರ್ಯಾಚರಣೆ ಅದೆಷ್ಟು ಪಾರದರ್ಶಕವಾಗಿದೆ ಎನ್ನುವುದು ತಿಳಿಯಬೇಕಾದರೆ, ಪ್ರತಿ ದಿನದ ದಾಳಿ, ವಶಪಡಿಸಿಕೊಂಡ ಮರಳು ಮತ್ತು ವಾಹನಗಳು, ದಾಖಲಿಸಿದ ಪ್ರಕರಣದ ಮಾಹಿತಿ ಮಾಧ್ಯಮಗಳ ಮೂಲಕ ಬೆಳಕಿಗೆ ಬರಬೇಕಿದೆ. ಇಂಥದ್ದೊಂದು ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಚನ್ನಪಟ್ಟಣದಲ್ಲಿ ಘೋಷಿಸಿದ್ದ ಹಿಂದಿನ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಚುನಾವಣೆ ಭರಾಟೆಯಲ್ಲಿ ಮುಳುಗಿದರು. ನೀತಿ ಸಂಹಿತೆ ಮುಗಿದು, ಚುನಾವಣಾ ಖರ್ಚುವೆಚ್ಚ ಚುಕ್ತ ಮಾಡುವಷ್ಟರಲ್ಲಿ ಇಲ್ಲಿಂದ ಎತ್ತಂಗಡಿಯಾದರು.

ಅಕ್ರಮ ಮರಳುಗಾರಿಕೆ ವಿಷಯದಲ್ಲಿ ಹಿಂದಿನ ಜಿಲ್ಲಾಧಿಕಾರಿಗಳ ಶಪಥ, ಸಂಕಲ್ಪ, ವೀರಾವೇಶದ ಮಾತುಗಳು ನೀರಿನ ಮೇಲಿನ ಗುಳ್ಳೆಯಂತಾಗಿದ್ದವು. ಅವರಂತೆಯೇ ಹಾಗೆ ಬಂದು ಹೀಗೆ ಹೋಗಬೇಕೆನ್ನುವ ಇರಾದೆ ತಮಗಿಲ್ಲ ಎನ್ನುವುದೇ ಆದರೆ ಜಮಾದಾರ್ ನೈಜ ಕಳಕಳಿಯಿಂದ ಕೆಲಸ ಮಾಡಬೇಕಿದೆ.  ನಾನು ಏನನ್ನೂ ಹೇಳುವುದಿಲ್ಲ. ಮಾಡಿ ತೋರಿಸುತ್ತೇನೆ ಎಂದು ಹಿಂದಿನ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅಣಿಮುತ್ತುಗಳನ್ನು ಉದುರಿಸಿದ್ದರು. ಕಡೆಗೆ, ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ಮರಳುಗಾರಿಕೆ ಮಾತ್ರವಲ್ಲ, ಯಾವುದೇ ಅಕ್ರಮ ತಡೆಯಲಾಗದೆಂದು ಭಾಷಣ ಮಾಡಿ ಕೈತೊಳೆದುಕೊಂಡರು.
ಅದಕ್ಕೂ ಮುನ್ನ ಇದ್ದ ಶ್ರೀರಾಮರೆಡ್ಡಿ ಇನ್ನೂ ಭಿನ್ನ. ತಮ್ಮಿಂದ ಏನೂ ಆಗದೆನ್ನುವ ಮಾತೇ ಇರಲಿಲ್ಲ. ಆದರೆ, ಏನನ್ನೂ ಮಾಡುತ್ತಿರಲಿಲ್ಲ. ಕೇವಲ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸುವುದಕ್ಕಷ್ಟೇ ಅವರ ಕಾರ್ಯಭಾರ ಸೀಮಿತ. ಹಿಡಿದ ವಾಹನಗಳು, ವಶಪಡಿಸಿಕೊಂಡ ಮರಳು ಬಿಡಿಸುವ ವಿಷಯದಲ್ಲಿ ಆಗ ರಾಜಕಾರಣಿಗಳ ಮಾತಿಗೆ ಎಲ್ಲಿಲ್ಲದ ಮನ್ನಣೆ ಸಿಗುತ್ತಿತ್ತು.  ಚಂದ್ರಶೇಖರಯ್ಯ ಅವರಿದ್ದಾಗಂತೂ ಭೂ ವ್ಯವಹಾರಗಳಲ್ಲೇ ಮುಳುಗಿದ್ದರು. ನಿವೃತ್ತಿ ಅಂಚಿನಲ್ಲಿ ಬಂದ ಪುಟ್ಟಸ್ವಾಮಿ ಕಲ್ಲು ಗಣಿಗಾರಿಕೆಗೆ ತಡೆಗೆ ನೀಡಿದಷ್ಟು ಒತ್ತನ್ನು ಮರಳುಗಾರಿಕೆಗೆ ನೀಡಲಿಲ್ಲ. ಆರ್.ಕೆ.ರಾಜು ಇಲ್ಲಿಗೆ ಹೆಚ್ಚುವರಿ ಆದರು. ಮನೀಷ್ ಮೌದ್ಗಿಲ್, ಪೊನ್ನರಾಜು ಅವರಿಬ್ಬರು ಮರಳು ಮಾಫಿಯಾಕ್ಕೆ ಸಿಂಹಸ್ವಪ್ನರಾದರು. ಉಳಿದವರು ತಮಗೇನೂ ಸಂಬಂಧವಿಲ್ಲದಂತೆ ವರ್ತಿಸಿದರು.

-

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ