ಸೂಲಿಬೆಲೆ: ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಮನೆಯಿಂದ ಬೀದಿಗೆ ಎಳೆ ತಂದು ವಿಧವೆ ಮಹಿಳೆಯೊಬ್ಬರನ್ನು ಥಳಿಸಿ ಪ್ರಾಣ ಬೆದರಿಕೆ ಹಾಕಿ ದೌರ್ಜನ್ಯ ಎಸೆಗಿರುವ ಘಟನೆ ಹೊಸಕೋಟೆ ತಾಲೂಕಿನ ದೊಡ್ಡದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೌರ್ಜನ್ಯ ಎಸೆಗಿದ ವ್ಯಕ್ತಿಗಳ ಶಿಕ್ಷಿಸಿ ನ್ಯಾಯ ಕೊಡಿ ಎಂದು ದೂರಿತ್ತರೂ ಕ್ರಮ ಕೈಗೊಳ್ಳದ ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಮಹಿಳೆ ಆಯೋಗದ ಮೊರೆ ಹೋಗಿದ್ದಾರೆ. ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯ ಹೋಬಳಿಯ ದೊಡ್ಡದೇನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಮಂಜುಳ 2012 ರಲ್ಲಿ ಮಹಿಳೆಯರ ಸ್ವಾವಲಂಬನೆ ಚಟುವಟಿಕೆಗಾಗಿ ಸಾಲ ನೀಡುವ ಸಂಸ್ಥೆಯೊಂದರಿಂದ ರು.25 ಸಾವಿರ ಪಡೆದಿದ್ದರು.
ಗುಂಪು ಚಟವಟಿಕೆಯ ಕಾರಣ ಮಂಜುಳ ಜೊತೆಯಲ್ಲಿ ರಾಮಕ್ಕ, ಲಕ್ಷ್ಮಮ್ಮ ಸೇರಿಕೊಂಡಿದ್ದರು. ಸಾಲ ಪಡೆದ ದಿನ ರಾಮಕ್ಕ ಮತ್ತು ಗಂಡ ಪಾಂಡು ಮಂಜುಳ ಬಳಿ ವಾರದೊಳಗೆ ವಾಪಸ್ ನೀಡುವುದಾಗಿ ರು.10 ಸಾವಿರ ಪಡೆದುಕೊಂಡರು.
ಆದರೆ, ವರ್ಷ ಕಳೆದರೂ ಸಾಲ ವಾಪಸ್ ಕೊಡಲಿಲ್ಲ. ಕೇಳಿದಾಗಲೆಲ್ಲ ಪಾಂಡು ಮತ್ತು ರಾಮಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಕಳೆದ ತಿಂಗಳು ಸಾಲವನ್ನು ಮರು ಪಾವತಿಸುವಂತೆ ಒತ್ತಾಯಿಸಿದ್ದರಿಂದ ಪಾಂಡು ಮತ್ತು ರಾಮಕ್ಕ ಮನೆಯ ಹತ್ತಿರ ಬಂದು ಬೀದಿಗೆ ತಂದು ಸಾರ್ವಜನಿಕರ ಎದುರಿನಲ್ಲಿ ಕಾಲಿನಿಂದ ಒದ್ದು, ಸಾಲ ಕೇಳಿದರೆ ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನೆವಾಗಿಲ್ಲ. ಇದರಿಂದ ನೊಂದ ವಿಧವೆ ಮಂಜುಳಾ ನ್ಯಾಯ ಒದಗಿಸಿ ಎಂದು ದೂರಿ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ.