ಸುತ್ತೂರು: ಸುತ್ತೂರು ಶ್ರೀಮಠವು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಸ್ಮರಣೀಯವಾದದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದರು. ಭಾನುವಾರ ನಡೆದ ಸಮಾರಂಭದಲ್ಲಿ ಮಾತನಾಡಿ, ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಠವು ಗುರು ಪರಂಪರೆ ಬೆಳೆಸಿಕೊಂಡು ಬಂದಿದೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು, ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ, ಅನ್ನ ದಾಸೋಹ ನಡೆಸಿಕೊಂಡು ಬಂದಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಅದೊಂದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಶ್ರೀಕ್ಷೇತ್ರದ ಸೆಳೆತಕ್ಕೆ ಇಷ್ಟೊಂದು ಬೃಹತ್ ಸಂಖ್ಯೆಯ ಭಕ್ತಾದಿಗಳು ಆಗಮಿಸುವುದಕ್ಕೆ ಶ್ರೀಗಳ ಕರ್ತೃತ್ವ ಶಕ್ತಿಯೇ ಕಾರಣ. ಇವರ ಸೇವೆ ಸರ್ಕಾರಕ್ಕೆ ಸಾಟಿಯಾಗಲಾರದು. ಇಲ್ಲಿರುವ ಕೃಷಿ ಮೇಳ ಇಡೀ ದೇಶಕ್ಕೆ ಮಾದರಿಯಾಗಿದೆ. ಈಗ ಕೃಷಿ ಭೂಮಿಗಳೇ ಕಾಂಕ್ರಿಟ್ ಕಟ್ಟಡಗಳಾಗುತ್ತಿವೆ ಎಂದು ಅವರು ವಿಷಾದಿಸಿದರು. ಗಾಳಿಪಟ ಸ್ಪರ್ಧೆಗೆ ಚಾಲನೆ ನೀಡಿದ ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಎಲ್ಲಾ ಪಕ್ಷದವರು ರಾಜಕಾರಣದಲ್ಲಿ ಧರ್ಮ ಬೆರಸಬೇಕೆ ಹೊರತು, ಧರ್ಮದಲ್ಲಿ ರಾಜಕಾರಣ ಬೆರೆಸಬಾರದು. ಧರ್ಮವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರೆ ಸಮಾಜ ಉದ್ಧಾರವಾಗುವುದಿಲ್ಲ. ರಾಜಕಾರಣವು ಸಗಣಿಯಂತೆ, ಧರ್ಮವು ಗಂಧದಂತೆ ಎಂದರು. ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಸೋಮಹಳ್ಳಿ ವೀರಸಿಂಹಾಸನ ಶಿಲಾಮಠದ ಸಿದ್ಧಮಲ್ಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಆರ್. ಧ್ರುವನಾರಾಯಣ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಸಿ.ಎಸ್. ಕೃಷ್ಣಶೆಟ್ಟಿ ಇದ್ದರು.