ಬೆಂಗಳೂರು ನಗರ

ತಾನಾಗಿ ಉರುಳುತ್ತದೆಯೇ ಶೆಟ್ಟರ್ ಸರ್ಕಾರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಿಗರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಕಾರಣವೇನು?
ಇದಕ್ಕೆ ಉತ್ತರ ಸರ್ಕಾರ ಉರುಳದೇ ಇದ್ದರೆ ಯಡಿಯೂರಪ್ಪ ಸೇರಿದಂತೆ ಎಲ್ಲರೂ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬ ಆತಂಕ. ಇದಕ್ಕೆ ಕಾರಣ ಜೆಡಿಎಸ್ ನಿರ್ಧಾರದ ಬಗ್ಗೆ ಇದ್ದ ಅನುಮಾನ. ಹೌದು, ಸರ್ಕಾರ ಉರುಳಿಸುವಷ್ಟು ಸಂಖ್ಯಾಬಲ ತಮ್ಮಲ್ಲಿ ಇಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ರಾಜಿನಾಮೆ ನೀಡಿ ಸರ್ಕಾರ ತಾನಾಗಿಯೇ ಉರುಳಲಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಸಿಎಂ ಮೇಲೇಕೆ ಕೋಪ:  ಈ ಹಿಂದೆ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ತೀರ್ಮಾನಿಸಿದಾಗ ಅದಕ್ಕೆ ವಿರುದ್ಧವಾಗಿ ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗುವಂತೆ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ನೋಡಿಕೊಂಡರು. ನಂತರ ಸದಾನಂದಗೌಡರು ತಮಗೆ ತಿರುಗಿಬಿದ್ದರು ಎಂಬ ಕಾರಣಕ್ಕೆ ಅವರನ್ನು ಕೆಳಗಿಳಿಸಿ ತಾವು ಹಿಂದೆ ವಿರೋಧಿಸಿದ್ದ ಜಗದೀಶ್ ಶೆಟ್ಟರ್ ಅವರನ್ನೇ ಮುಖ್ಯಮಂತ್ರಿ ಮಾಡಿದರು.
ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಯಡಿಯೂರಪ್ಪ ಅವರು ಕೆಜೆಪಿ ಸೇರಿದ ಮೇಲೆ ಮತ್ತು ಜಗದೀಶ್ ಶೆಟ್ಟರ್ ಅವರು ಬಜೆಟ್ ಮಂಡಿಸುತ್ತಾರೆ ಎಂಬುದು ಖಚಿತವಾಗುತ್ತಿದ್ದಂತೆ ಆತಂಕ ಶುರುವಾಯಿತು. ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸಿದರೆ ಅದು ಕೆಜೆಪಿ ಪಾಲಿಗೆ ಮುಳುವಾಗಬಹುದು ಎಂಬುದು ಈ ಆತಂಕಕ್ಕೆ ಕಾರಣ. ಏಕೆಂದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ ಮೂರು ಬಜೆಟ್‌ಗಳಲ್ಲಿ ಸಾಕಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿದ್ದರು. ನಂತರ ಸದಾನಂದಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಮಂಡಿಸಿದ ಬಜೆಟ್‌ನಲ್ಲಿ ಹೊಸ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ಇದೀಗ ಜಗದೀಶ್ ಶೆಟ್ಟರ್ ಅವರು ಮಂಡಿಸಲಿರುವ ಬಜೆಟ್ ಚುನಾವಣಾ ಬಜೆಟ್ ಆಗಿರುತ್ತದೆ.
ಹೀಗಾಗಿ ಸಹಜವಾಗಿಯೇ ಕಳೆದ ನಾಲ್ಕು ವರ್ಷಕ್ಕಿಂತ ಹೆಚ್ಚು ಜನಪರ ಬಜೆಟ್ ಮಂಡಿಸುತ್ತಾರೆ. ಇದನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆಗೆ ಹೋದರೆ ಅದರ ಮೊದಲ ಪೆಟ್ಟು ಬೀಳುವುದು ಕೆಜೆಪಿಗೆ. ಹೀಗಾಗಿ ಯಾವುದೇ ಕಾರಣಕ್ಕೂ ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸಬಾರದು ಎಂಬ ತೀರ್ಮಾನಕ್ಕೆ ಯಡಿಯೂರಪ್ಪ ಅವರು ಬಂದರು. ಇದಕ್ಕಾಗಿ ಕೆಜೆಪಿ ವತಿಯಿಂದ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ ಯಡಿಯೂರಪ್ಪ ಅವರು, ತಮ್ಮ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಶೆಟ್ಟರ್ ನೇತೃತ್ವದ ಸರ್ಕಾರ ನಿರ್ಲಕ್ಷಿಸುತ್ತಿದೆ. ಹೀಗಾಗಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವಂತಿಲ್ಲ ಎಂದು ಹೇಳಿಕೊಂಡು ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ನಾಂದಿ ಹಾಡಿದರು.
ಇನ್ನೊಂದೆಡೆ, ತಾವು ಯಡಿಯೂರಪ್ಪ ಅವರ ಬೆಂಬಲಿಗರು ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಿ ರಾಜಿನಾಮೆ ನೀಡುವ ಬಗ್ಗೆ ಮಾತನಾಡಲಾರಂಭಿಸಿದರು. ಆದರೆ, ಇಷ್ಟಾದರೂ ಮುಖ್ಯಮಂತ್ರಿ ಶೆಟ್ಟರ್ ಅವರು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಬೆಳಗಾವಿಯಿಂದ ಪ್ರಯತ್ನ ಆರಂಭ:  ಸರ್ಕಾರ ಉರುಳಿಸಬೇಕು ಎಂಬ ಪ್ರಯತ್ನ ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಆರಂಭವಾಗಿತ್ತು. ಆದರೆ, ಶಾಸಕರು ಸ್ಪಂದಿಸದೇ ಇರುವುದು, ಕೆಲವು ಸಚಿವರು ಸರ್ಕಾರ ಉರುಳಿಸುವ ತಮ್ಮ ಪ್ರಯತ್ನಕ್ಕೆ ಕೈಜೋಡಿಸಲು ನಿರಾಕರಿಸಿದ್ದು ಯಡಿಯೂರಪ್ಪ ಅವರಿಗೆ ಹಿನ್ನಡೆಯುಂಟು ಮಾಡಿತು.
ಸಂಖ್ಯಾಬಲ ಕಡಿಮೆ ಇರುವಾಗ ಸರ್ಕಾರ ಉರುಳಿಸುವ ತಮ್ಮ ಪ್ರಯತ್ನ ಕೈಗೂಡುತ್ತದೆ ಎಂಬ ನಂಬಿಕೆ ಅವರಲ್ಲೂ ಇರಲಿಲ್ಲ. ಏಕೆಂದರೆ, ಯಡಿಯೂರಪ್ಪ ಅವರಿಂದ ಸರ್ಕಾರ ಉರುಳುತ್ತದೆ ಎಂದಾದಲ್ಲಿ ಜೆಡಿಎಸ್ ಇದಕ್ಕೆ ಬೆಂಬಲ ನೀಡಲು ಸಾಧ್ಯವಿಲ್ಲ. ವೈರಿಯ ವೈರಿ ಮಿತ್ರನಾಗುತ್ತಾನೆ ಎಂಬಂತೆ ತಮ್ಮ ವಿರುದ್ಧದ ಸಿಟ್ಟಿಗಾಗಿ 26 ಸದಸ್ಯ ಬಲ ಹೊಂದಿರುವ ಜೆಡಿಎಸ್ ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲಿಸಬಹುದು ಎಂಬ ಆತಂಕ ಕಾಣಿಸಿಕೊಂಡಿತು.
ಈ ಎಲ್ಲಾ ಕಾರಣಗಳಿಂದಾಗಿ ಸರ್ಕಾರ ಉರುಳಿಸುವ ತಮ್ಮ ಪ್ರಯತ್ನ ಕೈಬಿಟ್ಟು ತಮ್ಮ ಬೆಂಬಲಿಗ ಶಾಸಕರಿಂದ ರಾಜಿನಾಮೆ ಕೊಡಿಸಿ, ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ನೋಡಿಕೊಂಡು ರಾಜ್ಯಪಾಲರು ಅಥವಾ ಪ್ರತಿಪಕ್ಷ ಕಾಂಗ್ರೆಸ್ ಮೂಲಕ ಸರ್ಕಾರ ಉರುಳಿಸುವ ತಂತ್ರಕ್ಕೆ ಯಡಿಯೂರಪ್ಪ ಮುಂದಾದರು. ಇದುವೇ ಬುಧವಾರ 13 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಕಾರಣವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ