ಬೆಂಗಳೂರು: ಶ್ರೀನಿವಾಸಪುರ ಎಪಿಎಂಸಿ ಅಧ್ಯಕ್ಷ ಎಂ. ಶ್ರೀನಿವಾಸ ಮತ್ತು ಅವರ ಪತ್ನಿ ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆ ವೈದ್ಯೆ ಡಾ.ಎಸ್. ಚಂದ್ರಕಲಾ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಶ್ರೀನಿವಾಸಪುರ ತಾಲೂಕಿನ ಇಮ್ಮರಕುಂಟೆ ಗ್ರಾಮದ ಎಂ. ಮಾರುತಿ ಎಂಬುವವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ನ್ಯಾಯಾಲಯದ ಆದೇಶದಂತೆ ಶ್ರೀನಿವಾಸ್ ಮತ್ತವರ ಪತ್ನಿಗೆ ಸೇರಿದ ಬೆಂಗಳೂರಿನ ಒಂದು ಹಾಗೂ ಶ್ರೀನಿವಾಸಪುರದ ನಾಲ್ಕು ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರದ ಚಿಂತಾಮಣಿಯಲ್ಲಿ ದಂಪತಿ ವಾಸವಿರುವ 48.50 ಲಕ್ಷ ಬೆಲೆಬಾಳುವ ಮನೆ, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ 23 ಲಕ್ಷ ಬೆಲೆ ಬಾಳುವ ಮನೆ, ಶ್ರೀನಿವಾಸಪುರದಲ್ಲಿ 5 ಲಕ್ಷ ಬೆಲೆಬಾಳುವ 2ನಿವೇಶನ, 15 ಲಕ್ಷ ಬೆಲೆಯ ಇನ್ನೋವಾ ಕಾರು, 4 ಲಕ್ಷದ ಟ್ರ್ಯಾಕ್ಟರ್ ಹಾಗೂ 16 ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಳು, ಚರಾಸ್ತಿ, ಸ್ಥಿರಾಸ್ತಿ ಸೇರಿ 1.16 ಕೋಟಿ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಶೋಧನೆ ಕಾರ್ಯ ಮುಂದುವರಿಸಿದ್ದಾರೆ.