ಬೆಂಗಳೂರು ನಗರ

ನಗರದಲ್ಲಿ ಮಿಲ್ಕ್ ರೂಟ್ ಹಾಲು ಬಿಡುಗಡೆ

Srinivasamurthy VN

ಬೆಂಗಳೂರು: 'ಮೋಕ್ಷ ಯುಗ್ ಆ್ಯಕ್ಸೆಸ್‌' ಸಂಸ್ಥೆ 'ಮಿಲ್ಕ್ ರೂಟ್‌' ಎಂಬ ಹೆಸರಿನಲ್ಲಿ ನಗರದ ಮಾರುಕಟ್ಟೆಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗುರುವಾರ ಬಿಡುಗಡೆ ಮಾಡಿದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರು ಗುರುವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ರೈತರ ಆರ್ಥಿಕ ಅಭಿವೃದ್ಧಿ ತಮ್ಮ ಸಂಸ್ಥೆಯ ಪರಮೋದ್ದೇಶವಾಗಿದ್ದು, ಮುಂದಿನ 3 ವರ್ಷಗಳಲ್ಲಿ 1 ಲಕ್ಷ ರೈತರನ್ನು ಸಂಪರ್ಕಿಸಿ ಜಾನುವಾರುಗಳ ಹಾಲಿನ ಇಳುವರಿಯನ್ನು 4 ಲೀ.ನಿಂದ 15 ಲೀ.ಗೆ ಹೆಚ್ಚಿಸುವ ಗುರಿ ಇರಿಸಿಕೊಳ್ಳಲಾಗಿದೆ. ರೈತರಿಂದ ಸರಬರಾಜಾಗುವ ಹಾಲು ಜಾಗತೀಕ ಮಾರುಕಟ್ಟೆಯಲ್ಲಿ ದೊರೆಯುವ ಪೌಷ್ಟಿಕ ಹಾಗೂ ಆರೋಗ್ಯಪೂರ್ಣ ಹಾಲಿಗೆ ಸಮನಾಗಿರುವಂತಹ ಯೋಜನೆಯನ್ನು ಸಂಶೋಧಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು.
ಕ್ರಿಕೆಟಿಗ ರಾಹುಲ್ ದ್ರಾವಿಡ್ ಹಾಗೂ ಚಿತ್ರನಟಿ ರಮ್ಯಾ ರಾಯಭಾರಿಗಳಾಗಿರುವ 'ಮಿಲ್ಕ್ ರೂಟ್‌' ಹಾಲು ಮತ್ತು ಹಾಲಿನ ಉತ್ಪನ್ನಗಳು ಮಂಡ್ಯ, ಚಿಕ್ಕಮಗಳೂರು ಮತ್ತು ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿವೆ. ಗ್ರಾಹಕರಿಂದ ಸಂಗ್ರಹಿಸುವ ದರದಲ್ಲಿ ಹೆಚ್ಚಿನ ಪ್ರಮಾಣ ರೈತರಿಗೆ ಸಲ್ಲುವಂತೆ ನೋಡಿಕೊಳ್ಳಲಾಗುವುದು. ಪ್ರಸ್ತುತ 1 ಲೀಟರ್ ಟೋನ್ಡ್ ಹಾಲಿಗೆ 30 ನಿಗದಿ ಪಡಿಸಲಾಗಿದೆ. ಇದು ನಂದಿನಿ ಹಾಲಿನ ದರಕ್ಕಿಂತ ಹೆಚ್ಚಾಗಿದ್ದರೂ ಖಾಸಗಿ ಡೇರಿಗಳ ಹಾಲಿನ ದರಕ್ಕೆ ಸಮನಾಗಿದೆ ಎಂದು ಅವರು ತಿಳಿಸಿದರು.
ರೈತರಿಂದ ಜವಾಬ್ದಾರಿಯುತವಾಗಿ ಹಾಲು ಸಂಗ್ರಹಿಸಿ ಗ್ರಾಮೀಣ ಆರ್ಥಿಕತೆ ಸುಧಾರಿಸುವುದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕಾಂಶಭರಿತ ಹಾಲು ಒದಗಿಸುವುದು ಮೋಕ್ಷಯುಗ್ ಆ್ಯಕ್ಸೆಸ್(ಎಂವೈಎ)ನ ಧ್ಯೇಯ. ಸಂಸ್ಥೆಗೆ ಮೂಲ ಬಂಡವಾಳವಾಗಿ 30 ಕೋಟಿ ಹೂಡಲಾಗಿದ್ದು, ಸಂಸ್ಥೆಯ ಜಾಲವನ್ನು ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ವಿಸ್ತರಿಸಿ 500 ಕೋಟಿಗೆ ಹೆಚ್ಚಿಸುವ ಗುರಿ ಇದೆ. ಆ ನಿಟ್ಟಿನಲ್ಲಿ ಮೊದಲ ಹಂತವಾಗಿ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣದ ಇತರ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ಹರ್ಷ ಮೊಯ್ಲಿ ತಿಳಿಸಿದರು.

SCROLL FOR NEXT