ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅಗ್ರಹಾರ ದಾಸರಹಳ್ಳಿ ನಿವಾಸಿ ಗಂಗಭೈರಮ್ಮ(35) ಮೃತ ಮಹಿಳೆ.
ಈಕೆಯ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬುದು ತಿಳಿದಿಲ್ಲ. ರಾತ್ರಿ ಮಲಗಿದ್ದ ಅವರು ಬುಧವಾರ ಮುಂಜಾನೆ ಮಂಚದಿಂದ ಕೆಳಗೆ ಬಿದ್ದಿದ್ದರು. ಬೆಳಗ್ಗೆ ಎದ್ದ ಪತಿ ದೇವೇಗೌಡ ಆಕೆಯ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ದೇವೇಗೌಡ ಅವರು ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, 18 ವರ್ಷದ ಹಿಂದೆ ಇವರ ವಿವಾಹವಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೇವೇಗೌಡರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ದಂಪತಿಗೆ ಮಕ್ಕಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬ ಸದಸ್ಯರು ಶಂಕಿಸಿದ್ದಾರೆ.