ಕ.ಪ್ರ.ವಾರ್ತೆ ಬೆಂಗಳೂರು ಮಾ.31-
ದೇಶೀಯ ಔಷಧಕ್ಕೆ ಆದ್ಯತೆ ನೀಡುವುದನ್ನು ಬಿಟ್ಟು ವಿದೇಶಿ ಔಷಧಕ್ಕೆ ಮಣೆ ಹಾಕುವುದು ತಪ್ಪು ಎಂದು ನ್ಯಾ.ಎಂ. ರಾಮಾ ಜೋಯಿಸ್ ಹೇಳಿದ್ದಾರೆ.
ಯೋಗ ಪರಿಜ್ಞಾನ ಪ್ರತಿಷ್ಠಾನದ ಪೂರ್ಣಾಯ ಆಯುರ್ವೇದ ಆಸ್ಪತ್ರೆಯ ದಶಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ನಾವು ನಮ್ಮದೇ ಆದ ಆಯುರ್ವೇದ ಔಷಧಕ್ಕೆ ಬೆಲೆ ನೀಡುವುದು ಬಿಟ್ಟು ಇಂಗ್ಲಿಷ್ ಔಷಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಆದರೆ, ದೇಶಿಯವಾದ ಆಯುರ್ವೇದ ಚಿಕಿತ್ಸೆ ಪಡೆದುಕೊಂಡಲ್ಲಿ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬ ವಿಷಯ ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಕರೆನೀಡಿದರು.
ನನಗೊಮ್ಮೆ ಕೆಮ್ಮು ಆರಂಭವಾದಾಗ ವೈದ್ಯರ ಬಳಿ ತೋರಿಸಿದೆ. ಆ ಸಂದರ್ಭದಲ್ಲಿ ಅವರು ಗಂಟಲಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದರು. ಇದರಿಂದ ಬೆದರಿದ ನಾನು ಆಯುರ್ವೇದ ವೈದ್ಯರ ಮೊರೆ ಹೋದೆ. ಅವರು ಪರೀಕ್ಷಿಸಿ ಗುಳಿಗೆ ಮತ್ತು ಚೂರ್ಣ ನೀಡಿದರು. ಇದರಿಂದ ನನಗಿದ್ದ ಕೆಮ್ಮು ಮಾಯವಾಯಿತು. ಹೀಗಾಗಿ ಆಯುರ್ವೇದ ಔಷಧವೇ ಉತ್ತಮ ಎಂದರು.
ದೇಶದಲ್ಲಿ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಆಯುರ್ವೇದ ಚಿಕಿತ್ಸೆಗೆ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿರುವ ವಸ್ತುಗಳನ್ನೇ ಬಳಕೆ ಮಾಡುತ್ತಿವೆ. ಎಷ್ಟೇ ವಿದ್ಯೆ ಕಲಿತರು ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದರು.
ಅಸಡ್ಡೆ ಬೇಡ: ಆರೋಗ್ಯ, ವಿದ್ಯೆ, ಚಾರಿತ್ರ್ಯ ಹೊಂದಿರುವವರು ಸಮಾಜದ ಉತ್ತಮ ಪ್ರಜೆಗಳಾಗುತ್ತಾರೆ. ಕೆಟ್ಟ ಅಭ್ಯಾಸಗಳು
ಅವರ ಬಳಿ ಸುಳಿಯುವುದಿಲ್ಲ. ಆಯುರ್ವೇದ ವೈದ್ಯರು ಎಂದರೆ ಕೆಲವರಿಗೆ ಅಸಡ್ಡೆ ಇದೆ ಇದನ್ನು ಬಿಟ್ಟು ಬಿಡಬೇಕು ಎಂದು ಹೇಳಿದರು.
ಪೂರ್ಣಾಯು ಆಯುರ್ವೇದ ಆಸ್ಪತ್ರೆಯ ಡಾ. ಜಯಪ್ರಕಾಶ್ ನಾರಾಯಣ್ ಮಾತನಾಡಿ, ಆಯುರ್ವೇದ ಔಷಧ ತಯಾರಿಕೆಗೆ ಅವಶ್ಯ ಬೇಕಾಗುವ ಔಷಧೀಯ ಗುಣಹೊಂದಿರುವ ಗಿಡಮೂಲಿಕೆಗಳು ದೊರೆಯುವುದು ಕಷ್ಟವಾಗಿದೆ. ಈ ಸಮಸ್ಯೆ ನಿವಾರಣೆಗಾಗಿ ನರ್ಸರಿಗಳಲ್ಲಿ ಔಷಧೀಯ ಗುಣಹೊಂದಿರುವ ಗಿಡ ಬೆಳೆಯಬೇಕು ಎಂದರು.
ಸಮಾರಂಭದಲ್ಲಿ ಯೋಗವಿದ್ಯಾ ಆಶ್ರಮದ ಆನಂದ ಚೈತನ್ಯ ಸ್ವಾಮೀಜಿ, ಯೋಗ ಪರಿಜ್ಞಾನ ಪ್ರತಿಷ್ಠಾನ ಅಧ್ಯಕ್ಷ ಡಾ.ಬಿ.ಜಿ. ಗೋಪಿನಾಥ್, ಡಾ.ಕೆ. ಕೃಷ್ಣಮೂರ್ತಿ ಭಾಗವಹಿಸಿದ್ದರು.