ಬೆಂಗಳೂರು: ಕಾಡುಗೊಂಡನಹಳ್ಳಿ ಸಮೀಪದ ಗೋವಿಂದಪುರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ನಸ್ರೀನ್ ಸುಲ್ತಾನಾ (35) ಕೊಲೆಯಾದವರು. ಮೂವರು ಗಂಡು ಮಕ್ಕಳೊಂದಿಗೆ ಇಲ್ಲಿನ 5ನೇ ಕ್ರಾಸ್ನಲ್ಲಿರುವ ಕಟ್ಟಡದ ಮೊದಲನೇ ಮಹಡಿಯಲ್ಲಿ ವಾಸವಿದ್ದ ನಸ್ರೀನ್ ಪತಿಯಿಂದ ವಿಚ್ಛೇದನ ಪಡೆದಿದ್ದರು. ಮಾಜಿ ಪತಿ ಇಮ್ತಿಯಾಜ್ ಪಾಷಾ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಇಬ್ಬರು ಮಕ್ಕಳು ಶಾಲೆಗೆ ಹೋಗಿದ್ದರು. ಪಿಯು ವ್ಯಾಸಂಗ ಮಾಡುತ್ತಿದ್ದ ಹಿರಿಯ ಮಗ ಸುಬೇದ್ ಪಾಷಾ ಮಧ್ಯಾಹ್ನ 1 ಗಂಟೆಗೆ ಮನೆಗೆ ಬಂದು ನಮಾಜ್ ಹೋಗುವುದಾಗಿ ಹೇಳಿ ಹೊರಗೆ ಹೋಗಿದ್ದ. 2 ಗಂಟೆ ಸುಮಾರಿಗೆ ವಾಪಸ್ ಬಂದಾಗ ತಾಯಿ ನಸ್ರೀನ್ ಅಡುಗೆ ಕೊಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಹತ್ತಿರದಲ್ಲೇ ಸ್ಟೋವ್ ಉರಿಯುತ್ತಿತ್ತು.
ಪರಿಚಯಸ್ಥರ ಕೃತ್ಯ?: ಹಲವು ವರ್ಷಗಳ ಹಿಂದೆಯೇ ಪತಿಯನ್ನು ತೊರೆದಿದ್ದ ನಸ್ರೀನ್ ಮನೆಯಲ್ಲೇ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಹೀಗಾಗಿ ನಿತ್ಯ ಮನೆಗೆ ಹಲವು ಅಪರಿಚಿತರು ಬಂದು ಹೋಗುತ್ತಿದ್ದರು. ಅದರಂತೆ ಶುಕ್ರವಾರವೂ ಮನೆಗೆ ಬಂದವರಿಗೆ ನಸ್ರೀನ್ ಚಹಾ ಮಾಡಲು ಅಡುಗೆ ಕೋಣೆಗೆ ಹೋಗಿ ಚಹಾ ಮಾಡಲು ಪಾತ್ರೆ ಇಟ್ಟು ಸ್ಟೋವ್ ಉರಿಸಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ದುಷ್ಕರ್ಮಿ ಮೊದಲು ತಲೆಗೆ ಹೊಡೆದಿದ್ದಾನೆ. ಬಳಿಕ ಹರಿತವಾದ ಚಾಕುವಿನಿಂದ ಕತ್ತು ಕುಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿದ್ದ ಕೆಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ವಸ್ತುಗಳು ಕಾಣೆಯಾಗಿರುವ ಬಗ್ಗೆ ಶಂಕೆ ಇದೆ. ಆದರೆ, ಮನೆಯಲ್ಲಿದ್ದ ವಸ್ತುಗಳ ಬಗ್ಗೆ ಮಾಹಿತಿ ಇಲ್ಲದ ಕಾರಣ ಏನೇನು ಎಷ್ಟು ಪ್ರಮಾಣದಲ್ಲಿ ಕಳವಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮನೆಯೊಳಗೆ ಯಾರೂ ಬಲವಂತದ ಪ್ರವೇಶ ಮಾಡಿಲ್ಲ. ಏಕೆಂದರೆ ಮನೆ ಬಾಗಿಲು ತೆರೆದ ಸ್ಥಿತಿಯಲ್ಲೇ ಇದ್ದು ಪರಿಚಿತರೇ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಸಿಪಿ ಸತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.