ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ 'ಸಂಗಾತಿ ರಂಗಭೂಮಿ' ಲಂಕೇಶ್-80 ರಂಗ ಪಯಣವನ್ನು ಆ.9 ರಿಂದ ಆರಂಭಿಸಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಸಂಚಾಲಕ ರಮೇಶ್ ಅಂಕೋಲಾ, ರಂಗ ಪಯಣ ಮಾ.9 ರವರೆಗೆ ನಡೆಯಲಿದೆ ಎಂದರು. ಅಂಕೋಲೆಯ ಸ್ವಾತಂತ್ರ್ಯ ಸಂಗ್ರಾಮದ ಸಭಾಭವನದಲ್ಲಿ ಉದ್ಘಾಟನೆ ನಡೆಯಲಿದ್ದು, 'ಕ್ರಾಂತಿ ಬಂತು ಕ್ರಾಂತಿ' ನಾಟಕ ಪ್ರದರ್ಶನದಿಂದ ಚಾಲನೆಗೊಳ್ಳಲಿದೆ. ರಾಜ್ಯಾದ್ಯಂತ 80 ಪ್ರದರ್ಶನಗಳನ್ನು ನೀಡುವ ಉದ್ದೇಶವಿದೆ ಎಂದರು. ಲಂಕೇಶರ ಅಭಿಮಾನಿಗಳು ರಾಜ್ಯದ ಯಾವುದೇ ಭಾಗಕ್ಕೆ ಆಹ್ವಾನಿಸಿದರೂ ತಂಡ ಹೋಗಿ ನಾಟಕ ಪ್ರದರ್ಶಿಸುವುದಾಗಿ, ಇದಕ್ಕೆ 5000 ನಿಗದಿ ಮಾಡಿರುವುದಾಗಿ ಹೇಳಿದರು. ನಮ್ಮ ತಂದೆಯ ನೆನಪಿನಲ್ಲಿ ಇಂಥ ರಂಗ ಪಯಣ ಮಾಡಲು ಉದ್ದೇಶಿಸಿರುವ ಸಂಗಾತಿ ರಂಗಭೂಮಿಗೆ ಯಶಸ್ಸು ಸಿಗಲಿ ಎಂದು ಪತ್ರಕರ್ತೆ ಗೌರಿ ಲಂಕೇಶ್ ಆಶಿಸಿದರು. ಸಂಗಾತಿಯ ಗೌರವಾಧ್ಯಕ್ಷೆ ಸುಜಾತ ಟಿ. ಗಾಂವಕರ ಇದ್ದರು.