ಬೆಂಗಳೂರು: ಕಾನೂನು ಆಯೋಗಕ್ಕೆ ಸಿಬ್ಬಂದಿ ಮತ್ತು ಜಾಗದ ಕೊರತೆ ಇದ್ದು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಆಯೋಗದ ಅಧ್ಯಕ್ಷ ನ್ಯಾ.ಮೂ. ಎಸ್.ಆರ್.ನಾಯಕ್ ಅಳಲು ತೋಡಿಕೊಂಡಿದ್ದಾರೆ.
ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಯೋಗಕ್ಕೆ ಇಲ್ಲಿ ನೀಡಿರುವ ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಕನಿಷ್ಠ 10 ಸಾವಿರ ಚದರ ಅಡಿ ವಿಸ್ತೀರ್ಣ ಇರುವ ಕಚೇರಿ ಅಗತ್ಯವಿದೆ ಇದೆ ಎಂದರು.
ಆಯೋಗ ಪೂರ್ಣಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರುವುದಕ್ಕೆ ಅಧ್ಯಕ್ಷರ ಜತೆಗೆ ಒಬ್ಬರು ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಗಳು ಇರಬೇಕು. ಅವರ ನೇಮಕವಾಗಿಲ್ಲ. ಆ ನಂತರವಷ್ಟೇ ಸರ್ಕಾರ ಆಯೋಗಕ್ಕೆ ಪರಿಶೀಲಿಸಲು ಶಿಫಾರಸು ಮಾಡಿರುವ ಲೋಕಾಯುಕ್ತ ಕಾಯ್ದೆ, ಮೌಢ್ಯ ಮತ್ತು ಅದ್ಧೂರಿ ವಿವಾಹ ನಿಯಂತ್ರಣ ಕಾಯ್ದೆ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಸಾಧ್ಯ ಎಂದು ಹೇಳಿದರು. ಆಯೋಗಕ್ಕೆ ಸರ್ಕಾರ ರು. 1.60 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಜತೆಗೆ 30 ಸಿಬ್ಬಂದಿ ನೀಡಲಾಗಿದೆ. ಆದರೆ 15 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಸಂಶೋಧಕರು ಬೇರೆ ಕಡೆ ಕೆಲಸ ಮಾಡುವ ಪರಿಸ್ಥಿತಿ. ಇದನ್ನು ಹೊರತುಪಡಿಸಿ ಕೆಲ ತಜ್ಞರನ್ನು ಸದಸ್ಯರಾಗಿ ನೇಮಕ ಮಾಡಬೇಕಿದೆ. ಇದಕ್ಕೆಲ್ಲ ಜಾಗದ ಅಗತ್ಯವಿದೆ ಎಂದರು.