ಬೆಂಗಳೂರು: ಏಳು ತಿಂಗಳ ಮಗುವಿನ ಮೇಲೆ ಪತಿಯೇ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.
ನಗರದಲ್ಲಿ ಶಿಕ್ಷಕಿಯಾಗಿರುವ ಆಕೆ ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪಟೇಲ್ ನಾಗಪ್ಪ ಬಡಾವಣೆಯ ಮನೆಯಲ್ಲಿ ವಾಸವಿರುವ ಶಿಕ್ಷಕಿ ಹೊರಗೆ ಹೋಗುವಾಗ, ಪತಿಯೊಂದಿಗೆ 7 ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟುಹೋಗಿದ್ದರು. ವಾಪಸ್ ಮನೆಗೆ ಬಂದಾಗ ಮಗು ಅಳುತ್ತಿತ್ತು. ಎಷ್ಟು ಸಮಾಧಾನ ಮಾಡಿದರೂ ಅಳು ನಿಲ್ಲಿಸುತ್ತಿರಲಿಲ್ಲ. ಮಗುವಿನ ದೇಹದ ಮೇಲೆ ಕೆಲ ಗಾಯಗಳಾಗಿದ್ದವು. ಈ ಬಗ್ಗೆ ಪತಿಯನ್ನು ಕೇಳಿದಾಗ ಸೂಕ್ತ ಉತ್ತರ ನೀಡದೆ ಏನೇನೋ ಹೇಳಿದರು ಎಂದು ಆರೋಪಿಸಲಾಗಿದೆ.
ಪತಿಯ ವರ್ತನೆಯಿಂದ ಅನುಮಾನಗೊಂಡ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಮಗುವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವಿನ ಖಾಸಗಿ ಭಾಗದಲ್ಲಿ ಕೆಲವು ಅನುಮಾನಾಸ್ಪದ ಗಾಯಗಳು ಕಂಡುಬಂದಿವೆ. ಆದರೆ, ದೌರ್ಜನ್ಯ ನಡೆದಿರುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
್ಟದೌರ್ಜನ್ಯದ ಬಗ್ಗೆ ಖಚಿತವಾದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಮಹಿಳೆ ದುರುದ್ದೇಶಪೂರ್ವಕವಾಗಿ ದೂರು ನೀಡಿರುವ ಬಗ್ಗೆಯೂ ಪರಿಶೀಲನೆ ನಡೆಸುತ್ತೇವೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.