ಬೆಂಗಳೂರು: ಕಾರಣವಿಲ್ಲದೇ 10ನೇ ತರಗತಿ ವಿದ್ಯಾರ್ಥಿ ಕಪಾಳಕ್ಕೆ ಹೊಡೆದಿರುವ ಖಾಸಗಿ ಶಾಲಾ ಪ್ರಾಂಶುಪಾಲರ ವಿರುದ್ಧ ಬಾಲಕನ ತಂದೆ ಕಬ್ಬನ್‌ಪಾರ್ಕ್ ಪೊಲೀಸರಿಗೆ ಬುಧವಾರ ದೂರು ನೀಡಿದ್ದಾರೆ. ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಸ್ಪ್ರೇಸಿ ಮೆಮೋರಿಯಲ್ ಪ್ರೌಢಶಾಲೆ ಪ್ರಾಂಶುಪಾಲ ಕೃಪಾನಂದನ್ ವಿರುದ್ಧ ವಿದ್ಯಾರ್ಥಿ ಸೈಯದ್ ಖಾಸಿಂ(15) ತಂದೆ ಡಾ.ಸೈಯದ್ ನವೀದ್ ಅಹಮದ್ ದೂರು ನೀಡಿದ್ದಾರೆ. ದೂರಿನ ಅನ್ವಯ ಕಬ್ಬನ್‌ಪಾರ್ಕ್ ಪೊಲೀಸರು ಐಪಿಸಿ ಕಲಂ (323) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳವಾರ (ಆ. 5) ವಿಶೇಷ ತರಗತಿಯಲ್ಲಿ ಕುಳಿತಿದ್ದ ಮಗನಿಗೆ ಪ್ರಾಂಶುಪಾಲ ಕಪಾಳಕ್ಕೆ ಒಡೆದಿದ್ದಾರೆ. ಇದರಿಂದ ಮೂಗಿನಿಂದ ರಕ್ತಸ್ರಾವವಾಗಿತ್ತು. ಇದರಿಂದ ಖಿನ್ನನಾದ ಮಗ ಮನೆಗೆ ಬಂದು ಹೇಳಿಕೊಂಡಿದ್ದ. ಕೇಳಿದಾಗ ಪ್ರಾಂಶುಪಾಲರು ಕೆನ್ನೆಗೆ ಒಡೆದಿದ್ದಾರೆ ಎಂದು ಹೇಳಿದ್ದಾನೆ ಎಂದು ಡಾ. ನವೀದ್ ದೂರಿನಲ್ಲಿ ಆರೋಪಿಸಿದ್ದಾರೆ.
ಬಂಧನವಾಗಿಲ್ಲ: ಗಂಭೀರವಲ್ಲದ ಅಪರಾಧ ಪ್ರಕರಣವಾಗಿರದ ಕಾರಣ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಆಗುವುದಿಲ್ಲ. ಹೀಗಾಗಿ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದೇವೆ ಎಂದು ಕಬ್ಬನ್‌ಪಾರ್ಕ್ ಪೊಲೀಸರು ತಿಳಿಸಿದರು. ಇದುವರೆಗೂ ಆರೋಪಿ ಬಂಧನವಾಗಿಲ್ಲ. ಅವರು ಸಾಕ್ಷಿ ನಾಶಪಡಿಸುವ ಅಥವಾ ಊರು ಪರಾರಿಯಾಗಲು ಯತ್ನಿಸಿದ್ದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.
ಪುರುಷತ್ವ ಪರೀಕ್ಷೆಗೆ ಬಾರದಿದ್ದರೆ ನಿತ್ಯಾನಂದನ ಬಂಧಿಸಿ
ಬೆಂಗಳೂರು: ಕಾಮಿ ಸ್ವಾಮಿ ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಬಾರದಿದ್ದರೆ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಚಾಣುಕ್ಯ ಜನಗಣ ಮನ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಎಂ. ವಾಸುದೇವರಾವ್ ಕಶ್ಯಪ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವಿಕೃತ ಕಾಮಿ ನಿತ್ಯಾನಂದನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಮಾಜಕ್ಕೆ ನಿತ್ಯಾನಂದನ ಕೊಡುಗೆ ಏನೂ ಇಲ್ಲ. ಆತನ ಆಶ್ರಮ ಮೋಜಿನ ಕೇಂದ್ರವಾಗಿದೆ. ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಅಗ್ರಿಮೆಂಟ್ ಕೂಡ ಮಾಡಿಕೊಳ್ಳುವ ಕಾಮಿ ಸ್ವಾಮಿ ಕಾನೂನಿಂದ ತಪ್ಪಿಸಿಕೊಳ್ಳಲು ಬಿಡಬಾರದು ಎಂದರು.
ನಿವೇಶನಕ್ಕಾಗಿ ಯೋಧನ ಮಡದಿ ಅಳಲು
ಬೆಂಗಳೂರು: ನಿವೇಶನ ಕೋರಿ ಮನವಿ ಸಲ್ಲಿಸಿ ನಾಲ್ಕು ವರ್ಷಗಳಾದರೂ ಸರ್ಕಾರ ಇನ್ನು ಮಂಜೂರು ಮಾಡಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರನ ಮಡದಿ ಸಾವಿತ್ರಮ್ಮ ತಮ್ಮ ಅಳಲು ತೋಡಿಕೊಂಡರು. 87 ವರ್ಷದ ನಾನು, ಬರುತ್ತಿರುವ ಪಿಂಚಣಿಯಲ್ಲಿ ಬಾಡಿಗೆ ಕಟ್ಟಿಕೊಂಡು ಬದುಕುವುದು ಕಷ್ಟಕರವಾಗಿದೆ. ನನ್ನ ಪತಿ ಕೆ.ಎಚ್. ಆಂಜನೇಯ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸೇವೆಯನ್ನು ಪರಿಗಣಿಸಿ ಆಶ್ರಯ ನಿವೇಶನವನ್ನಾದರೂ ನೀಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಬೆಂಗಳೂರಿನ ಶಿವನಪುರ ಕಾಲೊನಿ, ದಾಸನಪುರ ಪಂಚಾಯಿತಿ ವ್ಯಾಪ್ತಿ ಆಶ್ರಯ ನಿವೇಶನಕ್ಕೆ ಮುಖ್ಯಮಂತ್ರಿ, ವಸತಿ ಸಚಿವರು, ರಾಜ್ಯಪಾಲರು, ರಾಷ್ಟ್ರಪತಿ, ಪ್ರಧಾನಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನು ಮುಂದಾದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನನ್ನ ಕಷ್ಟಕ್ಕೆ ಸ್ಪಂದಿಸಿ ನಿವೇಶನ ಮಂಜೂರು ಮಾಡಬೇಕು ಎಂದು ಕೇಳಿಕೊಂಡರು.