ಬೆಂಗಳೂರು: ಹೆಸರಘಟ್ಟ ಕೆರೆ ಒಳಗೊಂಡ 5 ಸಾವಿರ ಎಕರೆ ಪ್ರದೇಶವನ್ನು ಸಂರಕ್ಷಿತ ಪ್ರದೇಶವಾಗಿ ಪರಿಗಣಿಸಲು ನೀಡಿದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಗಣಿಸಿರುವುದಕ್ಕೆ ಸಂಸದ ಡಾ.ಎಂ. ವೀರಪ್ಪ ಮೊಯ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. 5 ಸಾವಿರ ಎಕರೆ ಪ್ರದೇಶವನ್ನು ಭವಿಷ್ಯದ ಜನಾಂಗದ ಒಳಿತಿಗೆ ಮೀಸಲಿಡಲು ಪ್ರಸ್ತಾವನೆಯೊಂದು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅರ್ಕಾವತಿ ಹಾಗೂ ಹೆಸರಘಟ್ಟ ಕೆರೆಯಿರುವ ಪ್ರದೇಶವನ್ನು ವಾಣಿಜ್ಯ ಚಟುವಟಿಕೆಗಳಿಗೆ ನೀಡಿದರೆ ಅಂತರ್ಜಲ ಮಟ್ಟ ಕುಸಿಯುತ್ತದೆ. ಪರಿಸರ ಸಂರಕ್ಷಣೆಗೆ ಕಾರಣವಾಗುವ ಈ ಪ್ರದೇಶವನ್ನು ಸಂರಕ್ಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಮೊಯ್ಲಿ ಸಲಹೆ ನೀಡಿದ್ದಾರೆ. ಕಬ್ಬನ್ ಪಾರ್ಕ್ ಹಾಗೂ ಲಾಲ್‌ಬಾಗ್‌ನಂತೆ ಈ ಪ್ರದೇಶ ರಕ್ಷಣೆಯಾಗಬೇಕು. ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಿಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತ್ಯಾಜ್ಯ ದಹನಕ್ಕೆ ವಿರೋಧ: ತ್ಯಾಜ್ಯವನ್ನು ದಹನ ಮಾಡುವ ಘಟಕ ಸ್ಥಾಪನೆಯನ್ನು ಬಿಬಿಎಂಪಿ ಕೈ ಬಿಡಬೇಕು ಎಂದು ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ. ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳದ ಬಿಬಿಎಂಪಿ ಮುಚ್ಚಿಹೋದ ಮಾವಳ್ಳಿಪುರ ಘಟಕವನ್ನು ಮತ್ತೆ ತೆರೆಯಲು ಚಿಂತಿಸಿದೆ. ಈ ನಡುವೆ ತ್ಯಾಜ್ಯ ದಹನ ಮಾಡುವ ಘಟಕ ಸ್ಥಾಪಿಸಲು ಬಿಬಿಎಂಪಿ ಮುಂದಾಗಿದೆ. ಆದರೆ ದಹನದಿಂದ ನಗರದ ಜನರಿಗೆ ಕ್ಯಾನ್ಸರ್‌ನಂತಹ ಭೀಕರ ಖಾಯಿಲೆ ಬರುವ ಸಾಧ್ಯತೆಗಳಿವೆ. ಹೀಗಾಗಿ ಹೊಸ ಯೋಜನೆ ಕೈ ಬಿಟ್ಟು ವಿದೇಶಗಳಲ್ಲಿರುವ ತ್ಯಾಜ್ಯ ನಿರ್ವಹಣೆಯ ಕ್ರಮವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.