ಮೈಕೋ ಬಡಾವಣೆ 100 ಅಡಿ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮೃತರಾದರು. ಬಿಟಿಎಂ ಮೊದಲನೇ ಹಂತದ ನಿವಾಸಿ ಚಾಲಕ ಅಹಮದ್ ಕಲೀಲ್(41) ಮೃತ ವ್ಯಕ್ತಿ. ಬುಧವಾರ ರಾತ್ರಿ 10.30ರ ಸುಮಾರಿಗೆ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಆ ರಭಸಕ್ಕೆ ಪಕ್ಕದ ರಸ್ತೆಗೆ ಹಾರಿ ಬಿದ್ದಿದ್ದಾರೆ. ಅಲ್ಲಿ ಬರುತ್ತಿದ್ದ ಮತ್ತೊಂದು ಕಾರೂ ಸಹ ಡಿಕ್ಕಿ ಹೊಡೆದಿದ್ದರಿಂದಸ್ಥಳದಲ್ಲೇ ಮೃತರಾದರು. ಮೊದಲು ಡಿಕ್ಕಿ ಹೊಡೆದ ವಾಹನ ಚಾಲಕ ಪರಾರಿಯಾಗಿದ್ದಾನೆ. ಇಂಡಿಕಾ ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಮೈಕೋ ಬಡಾವಣೆ ಸಮೀಪದ ಸಿಗ್ನಲ್ನಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ ವಾಹನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಸವಾರ ಸಾವು: ಅಶೋಕ ನಗರ ಅಗರಂ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದಿಂದ ಬಿದ್ದು ಗೆದ್ದಲಹಳ್ಳಿ ನಿವಾಸಿ ಗೋವಿಂದರಾಜು (29) ಮೃತರಾದರು. ತೀವ್ರ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಆರ್.ಟಿ. ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದರಾಜು, ಬುಧವಾರ ರಾತ್ರಿ ಸ್ನೇಹಿತನ ಮನೆಗೆ ಹೋಗಿದ್ದರು ಎನ್ನಲಾಗಿದೆ. ಅಶೋಕ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಬ್ಗ್ಯೊರ್: ಮುಸ್ತಫಾ ವಿರುದ್ಧ ಪೋಕ್ಸೊದಡಿ ಪ್ರಕರಣ ಬೇಡ
ವಿಬ್ಗ್ಯೊರ್ ಶಾಲೆ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ನೇರ ಆರೋಪ ಇಲ್ಲವೆಂದು ಹೆಸರಿಸಲ್ಪಟ್ಟಿರುವ ಸ್ಕೇಟಿಂಗ್ ಶಿಕ್ಷಕ ಮಹಮ್ಮದ್ ಮುಸ್ತಫಾ(30) ವಿರುದ್ಧದ ಪೋಕ್ಸೊ ಹಾಗೂ ಐಪಿಸಿ 376ಎ ಕಾಯ್ದೆ ಬದಲಾಯಿಸಲು ಕೋರಿ ವರ್ತೂರು ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಇದೇ ವೇಳೆ 2011ರಲ್ಲಿ ವೈಟ್ಫೀಲ್ಡ್ನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಾಲಕಿಗೆ ಕಿರುಕುಳ ನೀಡಿದ ಆರೋಪ ಸಂಬಂಧ ಮುಸ್ತಫಾ ವಿರುದ್ಧ ಲೈಂಗಿಕ ದೌರ್ಜನ್ಯ (ಐಪಿಸಿ 354) ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ತರುವುದು (ಐಪಿಸಿ 509) ಅನ್ವಯ ಪ್ರಕರಣ ದಾಖಲಿಸಿಕೊಳ್ಳುವಂತೆ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಅತ್ಯಾಚಾರದಲ್ಲಿ ಮುಸ್ತಫಾ ನೇರ ಪಾತ್ರ ಇಲ್ಲ ಎನ್ನುವುದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವ ಹಂತದಲ್ಲಿ ತಿಳಿಯಲಿದೆ. ಒಂದು ವೇಳೆ ಪ್ರಕರಣದಲ್ಲಿ ಆತನ ಪಾತ್ರ ಯಾವುದೇ ರೂಪದಲ್ಲಿ ಇಲ್ಲ ಎಂದಾದಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಬೀಗ ಮುರಿದು 20 ಲಕ್ಷ ಕಳವು
ಕೆ.ಜಿ ಹಳ್ಳಿ ಪಿಳ್ಳಣ್ಣ ಗಾರ್ಡನ್ನಲ್ಲಿ ನಸೀಮಾ ಬೇಗಂ ಎಂಬುವರ ಮನೆ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು 20 ಲಕ್ಷ ನಗದು ದೋಚಿದ್ದಾರೆ. ಶಿವಾಜಿನಗರದಲ್ಲಿ ಸಂಬಂಧಿಯೊಬ್ಬರು ನಿಧನರಾಗಿದ್ದರಿಂದ ನಸೀಮಾ ಅಲ್ಲಿಗೆ ತೆರಳಿದ್ದರು. ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ವಾಪಸಾದಾಗ ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಗೊತ್ತಾಗಿದೆ.
ಮತ್ತೊಂದು ಪ್ರಕರಣದಲ್ಲಿ ರಹಮತ್ನಗರದಲ್ಲಿ ಯೂನಸ್ ಎಂಬುವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ 12 ಸಾವಿರ ನಗದು ದೋಚಿದ್ದಾರೆ. ಆಟೋ ಚಾಲಕರಾಗಿರುವ ಯೂನಸ್ ಕುಟುಂಬ ಸದಸ್ಯರೊಂದಿಗೆ ಮಂಗಳವಾರ ಊರಿಗೆ ಹೋಗಿದ್ದರು. ಈ ವೇಳೆ ಕಳ್ಳರ ಮನೆ ಬಾಗಿಲು ಮುರಿದು ಕೃತ್ಯ ಎಸಗಿದ್ದಾರೆ. ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.