ಅಪಘಾತ ನಿಯಂತ್ರಣ, ಸುರಕ್ಷೆಗೆ ಒತ್ತು ನೀಡುವುದೇ ಗುರಿ
ಬೆಂಗಳೂರು: ರಸ್ತೆ ಅಪಘಾತಗಳನ್ನು ನಿಯಂತ್ರಿಸಿ, ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ನೂತನ ಮೋಟಾರು ಕಾಯ್ದೆಯನ್ನು ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನೆ ಗಡ್ಕರಿ ತಿಳಿಸಿದ್ದಾರೆ.
ಡೈಜಿಯೋ ಸಂಸ್ಥೆ ಹಾಗೂ ಎನ್‌ಡಿಟಿವಿ ಸಹಯೋಗದಲ್ಲಿ ನಗರ ಲೀಲಾ ಪ್ಯಾಲೇಸ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಕೇಂದ್ರ ಸರ್ಕಾರ ಸಂಬಂಧಪಟ್ಟ ಕಾನೂನನ್ನು ಬದಲಾಯಿಸುವುದರ ಜತೆಗೆ, ರಾಷ್ಟ್ರೀಯ ಹೆದ್ದಾರಿಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸುವ ಮೂಲಕ ಸುಧಾರಣೆ ತರಲು ಬದ್ಧವಾಗಿದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡಿಸಲಿದ್ದು ಚಾಲಕರು ಮತ್ತು ಪಾದಚಾರಿಗಳು ಹೆಚ್ಚನ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ರಸ್ತೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಡೈಜಿಯೋ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆನಂದ ಕೈಪಾಲು ಮಾತನಾಡಿ, ಜನರು ತಮ್ಮ ಕ್ರಿಯೆಗಳಿಗೆ ಜವಾಬ್ದಾರಿಯನ್ನು ಹೊರುವಂತೆ ಮತ್ತು ಸುರಕ್ಷತೆಗೆ ಹೆಚ್ಚು ಒತ್ತು ನೀಡುವಂತೆ ಮನವೊಲಿಸಲು ಡೈಜಿಯೋ ಮತ್ತು ಯುಎಸ್‌ಎಲ್ ಪ್ರಯತ್ನಿಸಲಿದೆ. ರಸ್ತೆ ಸುರಕ್ಷತಾ ಅಭಿಯಾನ ಒಂದು ವರ್ಷಗಳ ಕಾಲ ನಡೆಯಲಿದ್ದು ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಪಾಲುದಾರಿಕೆ ಹೊಂದಿದೆ. ಈ ಮೂಲಕ ಜನರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಬದಲಾವಣೆ ತರುವುದು ನಮ್ಮ ಉದ್ದೇಶವಾಗಿದೆ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಗರದಲ್ಲಿ ಅಪಘಾತಗಳನ್ನು ತಪ್ಪಿಸಲು ರಸ್ತೆ ವಿಸ್ತರಣೆ ಮಾಡಲಾಗುತ್ತದೆ. ವಾಹನ ಚಲಾಯಿಸುವವರು ಕಾನೂನು ಉಲ್ಲಂಘಿಸದೆ ತಪ್ಪಿಸಬಹುದು ಎಂದರು. ಕೇಂದ್ರ ನೂತನ ಮೋಟಾರು ಕಾಯ್ದೆ ಅನುಷ್ಠಾನವಾದರೆ ರಸ್ತೆ ಸುರಕ್ಷತೆಗೆ ಎಲ್ಲರೂ ಗಮನಹರಿಸಿದರೆ ಅಪಘಾತಗಳು ಕಡಿಮೆಯಾಗುವುದು ಎಂದು ಹೇಳಿದರು.
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮಾತನಾಡಿ, ವಾಹನ ಚಲಾಯಿಸುವ ಸಮಯದಲ್ಲಿ ಮೊಬೈಲ್‌ಗಳ ಬಳಕೆಯನ್ನು ಕಡಿಮೆ ಮಾಡಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ನಿಲ್ಲಿಸಿ ಅಂತಹ ಸಂದರ್ಭದಲ್ಲಿ ತಮ್ಮ ವಾಹನಗಳಿಗೆ ಬೇರೆ ಚಾಲಕರನ್ನು ನೇಮಿಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂರ್, ಸಚಿವ ರಾಮಲಿಂಗಾರೆಡ್ಡಿ, ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಇದ್ದರು.
---------------