ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಮಾರಣಾಂತಿಕ ಚರಂಡಿಗಳ ವಿರುದ್ಧ ಸಮರ ಸಾರಲು ಮುಂದಾಗಿರುವ ಸಂಸದ ರಾಜೀವ್ ಚಂದ್ರಶೇಖರ್, ಬಿಳೇಕಹಳ್ಳಿಯಲ್ಲಿ ಗೀತಾಲಕ್ಷ್ಮೀ ಸಾವಿಗೆ ಕಾರಣವಾದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಿಳೇಕಹಳ್ಳಿಯಲ್ಲಿ 8 ವರ್ಷದ ಗೀತಾಲಕ್ಷ್ಮೀ ಹಾಗೂ ಕೆ.ಆರ್. ವೃತ್ತದಲ್ಲಿ 12 ವರ್ಷದ ಯಶವಂತ್ ಸಾವಿಗೀಡಾಗಿದ್ದಾರೆ. ನಗರದ ಸುರಕ್ಷತೆಗಳ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನಿಗಾವಹಿಸಿದ್ದರೆ 2 ಮಕ್ಕಳ ಜೀವ ಉಳಿಸಬಹುದಿತ್ತು. ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲು ಬಿಬಿಎಂಪಿ ಅಥವಾ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರ್ಟ್‌ಗೆ ಅವರು ಮನವಿ ಮಾಡಿದ್ದಾರೆ. ನಮ್ಮ ಬೆಂಗಳೂರು ಪ್ರತಿಷ್ಠಾನವೂ ಜಂಟಿಯಾಗಿ ಈ ಪಿಐಎಲ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಬೆಂಗಳೂರು ನಗರದಲ್ಲಿ ಸಾಕಷ್ಟು ತೆರೆದ ಚರಂಡಿಗಳು ಹಾಗೂ ಗುಂಡಿಗಳಿವೆ. ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಇದರಿಂದ ಮಳೆ ಹೆಚ್ಚಾದಾಗ ಮಕ್ಕಳು ಚರಂಡಿ ಅಥವಾ ಗುಂಡಿಗಳಿಗೆ ಬಿದ್ದು ಸಾಯುವ ಘಟನೆ ನಡೆಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸುರಕ್ಷಾ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಬೇಕು ಹಾಗೂ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕಾರ್ಯಾಚರಣೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಘೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಬೆಂಗಳೂರಿನಲ್ಲಿ ಈ ರೀತಿಯ ಅವಘಡ ನಡೆಯುತ್ತಿರುವುದು ಇದೇ ಮೊದಲಲ್ಲ. ಪುಕ್ರಾಜ್ ಜೈನ್ ಅವರು ಮಳೆ ನೀರಿನಲ್ಲಿ ಕೊಚ್ಚಿ ಹೋದರು. ರಿಹಾನ್ ಎಂಬ ಮಗುವು ಚರಂಡಿ ನೀರಿನಲ್ಲಿ ತೇಲಿ ಹೋಗಿದೆ. ಸುಮಾರು 5 ವರ್ಷದ ಅಭಿಷೇಕ್ ಎಂಬ ಬಾಲಕ ಚರಂಡಿ ನೀರಿನ ಸೆಳೆತಕ್ಕೆ ಸಿಕ್ಕು ಸಾವನ್ನಪ್ಪಿದ್ದ.
ಇವೆಲ್ಲ ಘಟನೆಗಳು ಬಿಬಿಎಂಪಿ ನಿರ್ಲಕ್ಷ್ಯದಿಂದ ಸಂಭವಿಸಿದೆ. ಇವೆಲ್ಲ ಪ್ರಕರಣಗಲ್ಲಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಹಣ ನೀಡಿ ಮೌನವಹಿಸಲಾಗಿದೆ. ಆದರೆ ಬೇಜಾವಾಬ್ದಾರಿ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಳೆಗಾಲ ಆರಂಭವಾಗುವ ಮುಂಚೆ ಈ ಚರಂಡಿ ಅಥವಾ ಕಾಲುವೆಗಳಿಗೆ ತಡೆಗೋಡೆ ಕಟ್ಟಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ.
ಈ ಸಂಬಂಧ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದಿಷ್ಟ ಸಮಯ ನಿಗದಿಪಡಿಸಿ ಯೋಜನೆ ರೂಪಿಸಲು ನಿರ್ದೇಶಿಸಬೇಕು. ಇದಕ್ಕೆ ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಬೇಕು ಹಾಗೂ ಮ್ಯಾನ್‌ಹೋಲ್‌ಗಳನ್ನು ಮುಚ್ಚಬೇಕು. ಜತೆಗೆ ಕಾಮಗಾರಿ ನಡೆಯುತ್ತಿದ್ದರೆ ಕಡ್ಡಾಯವಾಗಿ ಮುನ್ನೆಚ್ಚರಿಕೆಯ ಸಂದೇಶ ಇರುವ ಸೂಚನಾ ಫಲಕ ಹಾಕುವಂತೆ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
---------------------------