ಬೆಂಗಳೂರು: ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದ ಬಂದಿದ್ದ ಶಿಕ್ಷಕರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಗುರುವಾರ ಕ್ಲಾಸ್ ತೆಗೆದುಕೊಂಡರು.
ಕಿಮ್ಮನೆ ರತ್ನಾಕರ್ ಅವರು ಇಂದು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಸಚಿವರನ್ನು ಭೇಟಿ ಮಾಡಿದ ಕೋಲಾರ ಶಿಕ್ಷಕರಾದ ಎಲ್. ಶ್ರೀನಿವಾಸ್, ನಂಜುಂಡೇಗೌಡ ಮತ್ತು ಕೆ.ಬಿ. ರೆಡ್ಡಪ್ಪ ಎಂಬುವರು ತಮ್ಮನ್ನು ವರ್ಗಾವಣೆ ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ಶಿಕ್ಷಕರ ಮನವಿ ಸ್ವೀಕರಿಸಿದ ಸಚಿವರು, ರಾಷ್ಟ್ರಪಿತ ಮಹಾತ್ಮ ಗಾಂಧಿ ಹುಟ್ಟಿದ ದಿನಾಂಕ ಮತ್ತು ಅವರ ಆದರ್ಶಗಳು, ವಿವೇಕಾನಂದರ ಆದರ್ಶಗಳೇನಾಗಿತ್ತು? ಹೀಗೆ ಹಲವು ಪ್ರಶ್ನೆಗಳನ್ನು ಶಿಕ್ಷಕರಿಗೆ ಕೇಳಿದರು. ಇದರಿಂದ ತಬ್ಬಿಬ್ಬಾದ ಶಿಕ್ಷಕರು, ಸಚಿವರು ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದ ಶಿಕ್ಷಕರಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು.
ಮಹಾತ್ಮ ಗಾಂಧಿ ಮತ್ತು ವಿವೇಕನಂದರ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದ ನೀವು ಮಕ್ಕಳಿಗೆ ಏನೂ ಪಾಠ ಮಾಡುತ್ತೀರಾ? ಮೊದಲು ನೀವು ಮಹಾತ್ಮರ ಬಗ್ಗೆ ತಿಳಿದುಕೊಂಡು ಬನ್ನಿ. ಆನಂತರ ನಿಮ್ಮ ಮನವಿಯನ್ನು ಪರಿಶೀಲಿಸುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ.