ಬೆಂಗಳೂರು: ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಿಗೆ ತಡೆ ಹೇರುವ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದ್ದು, ಸ್ಮಾರ್ಟ್ ಯೋಜನೆ ಜಾರಿಗೆ ಮುಂದಾಗಿದೆ.
ಕಾಮುಕರ ದಾಳಿಗೆ ತುತ್ತಾದ ಮತ್ತು ಕಿರುಕುಳ ಅನುಭವಿಸುತ್ತಿರುವ ಮಹಿಳೆಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಿಶೇಷವಾದ ಮೊಬೈಲ್ ಆಪ್ ತಯಾರಿಸಲಾಗುತ್ತಿದ್ದು, ಶೀಘ್ರದಲ್ಲೇ ಇದನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಸಂಬಂಧ ಸರ್ಚಿಂಗ್ ಸೋಲ್ ಎಂಬ ಸಂಸ್ಥೆಯ ಜತೆ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ. ಆಪ್ ಸಂರಚನೆ ಕಾರ್ಯ ಹೆಚ್ಚು ಕಡಿಮೆ ಪೂರ್ಣಗೊಂಡಿದ್ದು, ಸ್ಮಾರ್ಟ್ ಫೋನ್ನಲ್ಲಿ ಈ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಂಡರೆ ಸಾಕಂತೆ!
ಸಾಮಾನ್ಯವಾಗಿ ಮಹಿಳಾ ದೌರ್ಜನ್ಯ ಪ್ರಕರಣ ವರದಿಯಾದಾಗಲೆಲ್ಲ ಮಾಧ್ಯಮಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರ ಬಗ್ಗೆ ಟೀಕೆಗಳು ಬರುತ್ತಿದ್ದವು. ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಪತ್ರ ಬರೆದು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಸಚಿವರು ವರ್ತಿಸುತ್ತಿದ್ದಾರೆ ಎಂಬ ಆರೋಪ ಇತ್ತು. ಆದರೆ ಅದ್ಯಾವ ಮಾಯದಲ್ಲಿ ಉಮಾಶ್ರಿ ಅವರ ತಲೆಗೆ ಈ ಸ್ಮಾರ್ಟ್ ಐಡಿಯಾ ಹೊಳೆಯಿತು ಎಂಬ ಕುತೂಹಲ ಈಗ ಎಲ್ಲರನ್ನೂ ಕಾಡುತ್ತಿದೆ.
ತಡೆ ಹೇಗೆ?
ಮಹಿಳೆಯರಿಗೆ ಕಿರುಕುಳ ನೀಡುವ ಅಥವಾ ದೌರ್ಜನ್ಯ ಎಸಗುವ ವ್ಯಕ್ತಿ ಇಲ್ಲವೇ ಗುಂಪಿನ ಮಾಹಿತಿ ಪೊಲೀಸರಿಗೆ ಲಭ್ಯವಾಗುವ ರೀತಿಯಲ್ಲಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ. ಈ ಸಂಬಂಧ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳ ಜತೆ ಸಂಪರ್ತ ಸಾಧಿಸುವ ಪ್ರಯತ್ನ ನಡೆಸಲಾಗುತ್ತದೆ.
ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಶೀಘ್ರದಲ್ಲೇ ಚಾಲನೆ ನೀಡಲು ನಿರ್ಧರಿಸಲಾಗಿದೆ. ಮಹಿಲೆಯರು ಮೊದಲು ಈ ಅಪ್ಲಿಕೇಶನ್ ನವ್ನು ತಮ್ಮ ಸ್ಮಾರ್ಟ್ ಫೋನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಯಾರಾದರೂ ಕಿರುಕುಳ ನೀಡಿದರೆ ಅಥವಾ ಅತ್ಯಾಚಾರಕ್ಕೆ ಯತ್ನಿಸಿದರೆ ಈ ಅಪ್ಲಿಕೇಶನ್ ಅನ್ನು ಟಚ್ ಮಾಡಿದ ತಕ್ಷಣ ಅದು ಕಾರ್ಯ ಆರಂಭಿಸುತ್ತದೆ. ಮಾತ್ರವಲ್ಲ, ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆಯುತ್ತಿದೆ ಎಂಬ ಸಂದೇಶ ರವಾನೆಯಾಗುತ್ತದೆ.
ಮೊಬೈಲ್ ಟವರ್ ಆಧಾರದ ಮೇಲೆ ಸ್ಥಳವನ್ನು ಪತ್ತೆ ಹಚ್ಚುವುದಕ್ಕೆ ಅನುಕೂಲವಾಗುವಂತಹ ತಂತ್ರಜ್ಞಾನವನ್ನು ಈ ಅಪ್ಲಿಕೇಶನ್ನಲ್ಲಿ ಅಳವಡಿಸಲಾಗುತ್ತಿದೆಯಂತೆ, ಸಧ್ಯಕ್ಕೆ ಇದು ಪರೀಕ್ಷೆ ಹಂತದಲ್ಲಿದ್ದು ಆದಷ್ಟು ಶೀಘ್ರದಲ್ಲಿ ಲಭ್ಯವಾಗಲಿದೆ. ಈ ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯವಸ್ಥೆ ಕಲ್ಪಿಸಿದ್ದು, ಸರ್ಚಿಂಗ್ ಸೋಲ್ ಸಂಸ್ಥೆಯ ಜತೆ ಒಡಂಬಡಿಕೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳ ಕನ್ನಡ ಪ್ರಭಕ್ಕೆ ತಿಳಿಸಿವೆ.
ಸಚಿವರೇ ಫೋನ್ ಎತ್ತದಿದ್ದರೆ ಆ್ಯಪ್ ಕತೆ ಎಂತೋ..?
ಕುತೂಹಲಕಾರಿ ಸಂಗತಿ ಎಂದರೆ, ಸರ್ಕಾರ ಇಂಥದೊಂದು ಅಪ್ಲಿಕೇಶನ್ ಜಾರಿಗೆ ತರುತ್ತಿರುವುದು ನಿಜವೇ ಎಂದು ಸಚಿವೆ ಉಮಾಶ್ರೀ ಅವರಿಂದ ಮಾಹಿತಿ ಪಡೆಯಲು ಫೋನ್ ಮಾಡಿದರೆ ಅವರು ಕರೆಯನ್ನೇ ಸ್ವೀಕರಿಸಲಿಲ್ಲ. ಸಾಮಾನ್ಯವಾಗಿ ರಾಜ್ಯದಲ್ಲಿ ಒಳ್ಳೆಯ ಅಥವಾ ಕೆಟ್ಟ ಘಟನೆ ನಡೆದಾಗ, ಸಚಿವೆ ಉಮಾಶ್ರೀ ಅವರಿಗೆ ಫೋನ್ ಸ್ವೀಕರಿಸಲೂ ಸಾಧ್ಯವಾಗದಷ್ಟು ಕೆಲಸ ಇರುತ್ತದೆ. ಈ ಬಾರಿಯೂ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು ಎಂದು ಭಾವಿಸಿಕೊಳ್ಳಬಹುದು. ಇಲಾಖೆ ಮುಖ್ಯಸ್ಥರೇ ಫೋನ್ ಕರೆ ಸ್ವೀಕರಿಸದೇ ಇರುವಾಗ, ಅವರು ಜಾರಿಗೆ ತರಲು ಉದ್ದೇಶಿಸಿರುವ ಮೊಬೈಲ್ ಅಪ್ಲಿಕೇಶನ್ ಕತೆ ಏನಾಗಬಹುದು ಎಂಬ ಸಂಶಯ ನಾಗರೀಕರನ್ನು ಕಾಡದೇ ಇರದು. ಅಪ್ಲಿಕೇಶನ್ ಕೂಡ ಸಚಿವರ ರೀತಿಯೇ ಅಗತ್ಯವಿದ್ದಾಗ ಕೈಕೊಟ್ಟರೆ ಕಷ್ಟ..!
-ರಾಘವೇಂದ್ರ ಭಟ್ಟ