ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಲು ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ. ಈ ಬಗ್ಗೆ ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ತಜ್ಞರ ಸಮಿತಿ ರಚಿಸಿ ಸೋಮವಾರ ಆದೇಶ ಹೊರಡಿಸಿದೆ.
ಬಿಬಿಎಂಪಿಯನ್ನು ವಿಭಜನೆ ಮಾಡುವ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಚಿಸಲಾಗಿರುವ ತಜ್ಞರ ಸಮಿತಿಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಅಧ್ಯಕ್ಷರಾಗಿದ್ದು, ಬಿಬಿಎಂಪಿ ಹಾಗೂ ಹಿಂದಿನ ಬೆಂಗಳೂರು ಅಜೆಂಡಾ ಟಾಸ್ಕ್‌ಪೋರ್ಸ್‌ನ ಸದಸ್ಯ ರವಿಚಂದರ್ ಸದಸ್ಯರಾಗಿದ್ದಾರೆ.
ಈ ತಜ್ಞರ ಸಮಿತಿಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಬಿಬಿಎಂಪಿಯ ಆಡಳಿತ ವಿಭಾಗದ ಅಪರ ಆಯುಕ್ತರಿಗೆ ಸೂಚಿಸಲಾಗಿದೆ. ಅಂತೆಯೇ, ಸಮಿತಿಯ ಸುಗಮ ಕಾರ್ಯನಿರ್ವಹಣೆಗಾಗಿ ಅಗತ್ಯವಿರುವ ಕಚೇರಿ, ಸಿಬ್ಬಂದಿ, ಪೀಠೋಪಕರಣಗಳು, ವಾಹನ ಸೌಲಭ್ಯ ಹಾಗೂ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಪಾಲಿಕೆಯ ಆಯುಕ್ತರಿಗೆ ಆದೇಶಿಸಲಾಗಿದೆ. ಪಾಲಿಕೆ ವಿಭಜನೆಯ ಪ್ರಸ್ತಾವನೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಮೂರು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಸಮಿತಿಗೆ ತಿಳಿಸಲಾಗಿದೆ. ಈ ಸಮಿತಿ ನೀಡುವ ವರದಿಯ ಆಧಾರದ ಮೇಲೆ ಸಾರ್ವಜನಿಕ ಸಲಹೆ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
ಮೂವರ ಮೇಲೆ ಗಮನ!: ಅತಿ ಹೆಚ್ಚಿನ ಸದಸ್ಯರನ್ನು ತಜ್ಞರ ಸಮಿತಿಯಲ್ಲಿ ಸೇರಿಸದೆ ನಗರದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಅರಿತಿರುವ ಮೂವರನ್ನು ಮಾತ್ರ ಸಮಿತಿಯಲ್ಲಿರಿಸಿರುವುದು ಗಮನಾರ್ಹ. ಮುಖ್ಯ ಕಾರ್ಯದರ್ಶಿಯಾಗಿ ನಗರದ ವ್ಯಾಪ್ತಿ ಹಾಗೂ ಅಭಿವೃದ್ಧಿಯ ಆಗ್ರಹವನ್ನು ಬಲ್ಲ ಬಿ.ಎಸ್.ಪಾಟೀಲರು ಅಧ್ಯಕ್ಷರಾಗಿದ್ದಾರೆ. ಇವರ ಕಾಲದಲ್ಲಿ ಅವರೊಂದಿಗೆ ಕಾರ್ಯನಿರ್ವಹಿಸಿದ್ದ ಹಾಗೂ ಅವರ 'ನೆಚ್ಚಿನ ಹುಡುಗ' ಎಂದೇ ಪರಿಗಣಿಸಲಾಗಿದ್ದ ಸಿದ್ದಯ್ಯ ಅವರು ಸಮಿತಿ ಸದಸ್ಯರು.