ಬೆಳಗಾವಿ

ಯುವತಿ ಮೇಲೆ ಗ್ಯಾಂಗ್‌ರೇಪ್

ರಾಯಬಾಗ ಬಳಿ ಘಟನೆ; ಕಬ್ಬಿಣದ ಸಲಾಕೆಯಿಂದ ಹೊಡೆದು ಹಾಳು ಬಾವಿಗೆ ಎಸೆದ ದುರುಳರು

ಬೆಳಗಾವಿ: ಕಾಲೇಜಿಗೆ ಹೊರಟಿದ್ದ ಯುವತಿಯನ್ನು ಅದೇ ಗ್ರಾಮದ ಮೂವರು ದುರುಳರು ಕಬ್ಬಿನ ಹೊಲಕ್ಕೆ ಹೊತ್ತೊಯ್ದು ಅಮಾನುಷವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕವಾಗಿ ಹೊಡೆದು ಅವಳ ಕೈಕಾಲು ಕಟ್ಟಿ ಪಾಳು ಬಾವಿಯೊಂದರಲ್ಲಿ ಎಸೆದು ಹೋದ ಘಟನೆ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಡೆದಿದೆ.

ಇಟ್ನಾಳ ಗ್ರಾಮದ ಈ ನತದೃಷ್ಟ ಯುವತಿ ಎಂದಿನಂತೆ ಫೆ.26 ರಂದು ಮುಂಜಾನೆ 6.20ರ ಹೊತ್ತಿಗೆ ತನ್ನ ತೋಟದ ಮನೆಯಿಂದ ಸೈಕಲ್‌ನಲ್ಲಿ ಸುಮಾರು 12 ಕಿ.ಮೀ. ದೂರದಲ್ಲಿರುವ ಮೂಡಲಗಿಯ ಎಸ್‌ಎಸ್‌ಆರ್ ಕಾಲೇಜಿಗೆ ಹೊರಟಿದ್ದಳು. ಪಿಯುಸಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಈ 17 ವರ್ಷದ ಯುವತಿಯನ್ನು ಅದೇ ಗ್ರಾಮದ ಸತ್ತೆಪ್ಪ ಬೀರಪ್ಪ ಡಾಂಗೆ, ಯಮನೂರ ಸಹದೇವ ರಾಜಾಪುರೆ, ಸುರೇಶ ಸಿದ್ದಪ್ಪ ಡಾಂಗೆ ಎಂಬ ದುರುಳರು ಅಡ್ಡಗಟ್ಟಿ ಒತ್ತಾಯಪೂರ್ವಕವಾಗಿ ಕಬ್ಬಿನ ಗದ್ದೆಗೆ ಹೊತ್ತುಕೊಂಡು ಒಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ವಿದ್ಯಾರ್ಥಿನಿ ಗುರುವಾರ ರಾಯಬಾಗ ಪೊಲೀಸರಿಗೆ ದೂರು ನೀಡಿದ್ದಾಳೆ.

ಮರಳಿದ ಪ್ರಜ್ಞೆ: ಅತ್ಯಾಚಾರವೆಸಗಿ, ಹತ್ಯೆ ಮಾಡುವ ಉದ್ದೇಶದಿಂದ ಕಬ್ಬಿಣದ ಸಲಾಕೆಯಿಂದ ಈಕೆಗೆ ಬಲವಾಗಿ ಹೊಡೆಯಲಾಗಿತ್ತು. ಪ್ರಜ್ಞೆ ತಪ್ಪಿ ಬಿದ್ದ ಅವಳು ಮೃತಳಾಗಿದ್ದಾಳೆಂದು ಭಾವಿಸಿದ ಆರೋಪಿಗಳು ಕೈಕಾಲು ಕಟ್ಟಿ ರಸ್ತೆ ಬದಿಯಲ್ಲಿರುವ ನೀರಿಲ್ಲದ ಬಾವಿಗೆ ಎಸೆದು ಪರಾರಿಯಾಗಿದ್ದರು.

ರಸ್ತೆ ಬದಿಯಲ್ಲೇ ಬಾವಿ ಇದ್ದುದರಿಂದ ದಾರಿ ಹೋಕರು, ಅಕ್ಕಪಕ್ಕದವರು ಬಾವಿಯಲ್ಲಿ ಮೃತದೇಹವೊಂದು ಬಿದ್ದಿದೆ ಎಂದು ಭಾವಿಸಿ ಕೆಳಗಿಳಿದು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿಯ ಸ್ಥಿತಿ ಅರಿವಿಗೆ ಬಂದಿದೆ. ತಕ್ಷಣ ಆಕೆಯ ಮನೆಗೆ ವಿಷಯ ತಿಳಿಸಿ, ಯುವತಿಯನ್ನು ಹಾರೂಗೇರಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿಡಲಾಗಿದೆ.

ಪ್ರಾಣಾಪಾಯದಿಂದ ಪಾರು: ಯುವತಿಗೆ ತೀವ್ರ ರಕ್ತಸ್ರಾವವಾಗಿದ್ದು, ಆಘಾತಗೊಂಡಿದ್ದಾಳೆ. ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯ ಡಾ. ಅಶೋಕ ಮೇಲಾಪುರ ತಿಳಿಸಿದ್ದಾರೆ. ಬುಧವಾರ ರಾತ್ರಿ 10 ಗಂಟೆಯ ಹೊತ್ತಿಗೆ ಅವಳಿಗೆ ಪ್ರಜ್ಞೆ ಬಂದಿದೆ. ಈಗಲೂ ತೀವ್ರ ನಿಗಾ ಘಟಕದಲ್ಲೇ ಇದ್ದಾಳೆ ಎಂದು ಅವರು ವಿವರಿಸಿದರು.
ರಾತ್ರಿಯೇ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಹೇಳಿಕೆ ಪಡೆದುಕೊಂಡಿದ್ದಾರೆ. ಗುರುವಾರ ಪ್ರಕರಣ ಸಹ ದಾಖಲಿಸಿಕೊಳ್ಳಲಾಗಿದ್ದು ಆರೋಪಿಗಳ ಬಂಧನಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ರಾಯಬಾಗ ಸಿಪಿಐ ಎಸ್.ಡಿ. ಜಲ್ದೆ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಗುರುವಾರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್, ಇಟ್ನಾಳ ಮತ್ತು ಹಾರೂಗೇರಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಆರೋಪಿಗಳ ಸುಳಿವು ದೊರಕಿದ್ದು, ಆದಷ್ಟು ಬೇಗ ಬಂಧಿಸುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಗ್ ಶಾಕ್: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರೆಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!