ಗೋಕಾಕ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಕೇವಲ ದಲಿತ ಸಮಾಜಕ್ಕೆ ಸೀಮಿತರಲ್ಲ. ಅವರು ಎಲ್ಲ ಸಮಾಜದ ಆಸ್ತಿ. ವಿಶ್ವದ ಮಹಾನ್ ಚೇತನ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಬಣ್ಣಿಸಿದ್ದಾರೆ.
ಅವರು ಇಲ್ಲಿಗೆ ಸಮೀಪದ ಅರಬಾವಿಯ ಅಂಬೇಡ್ಕರ್ ನಗರ(ಗುಡದವಾರಿ)ದಲ್ಲಿ ವಿವಿಧ ಸಂಘಗಳು ಜಂಟಿಯಾಗಿ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರಿಂದಲೇ ನಾವಿಂದು ಅಧಿಕಾರ ಅನುಭವಿಸುತ್ತಿದ್ದೇವೆ. ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಲಿತರು ಮುಖ್ಯವಾಹಿನಿಗೆ ಬಂದು ಅಧಿಕಾರ ಅನುಭವಿಸುತ್ತಿದ್ದರೆ ಇದಕ್ಕೆ ಅಂಬೇಡ್ಕರ ಅವರೇ ಕಾರಣ ಎಂದರು.
ದುಶ್ಚಟದಿಂದ ದೂರವಿದ್ದು ಸಮಾಜದ ಸರ್ವತೋಮುಖ ಏಳ್ಗೆಯಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು. ದುಶ್ಚಟಗಳಿಂದ ಸಮಾಜ ಹದಗೆಡುತ್ತಿದೆ. ವ್ಯಸನಮುಕ್ತಿ ಸಮಾಜ ನಿರ್ಮಾಣವಾಗಬೇಕೆಂದು ಪ್ರತಿಪಾದಿಸಿದ ಅವರು, ಪ್ರತಿಯೊಬ್ಬರೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕೆಂದು ಒತ್ತಿಹೇಳಿದರು.
ಮೂಲ ಸೌಕರ್ಯಕ್ಕೆ ಒತ್ತು: ಜನತೆಗೆ ನೀಡಿದ ಭರವಸೆಯಂತೆ ಅಗತ್ಯವಿರುವ ಮೂಲಭೂತ ಸೌಕರ್ಯ ನೀಡಲು ಬದ್ಧನಿದ್ದೇನೆ. ಲೋಕಸಭಾ ಚುನಾವಣೆ ಈಗ ಮುಗಿದಿದ್ದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ. ರಸ್ತೆ, ಕುಡಿಯುವ ನೀರು ಕಾಮಗಾರಿ, ವಸತಿ ರಹಿತ ಕಡುಬಡವರಿಗೆ ಮನೆಗಳ ನಿರ್ಮಾಣ ಮಾಡುತ್ತೇನೆ ಎಂದರು.
ವಿರೋಧ ಪಕ್ಷದಲ್ಲಿದ್ದರೂ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಅಡಚಣೆಯಾಗುವುದಿಲ್ಲ. ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತೇನೆ. ಮುಂದಿನ 4 ವರ್ಷಗಳ ಅವಧಿಯಲ್ಲಿ ಅರಬಾವಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಬಾಲಚಂದ್ರ ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಅಂಬೇಡ್ಕರ್ ಅವರು ದೇಶದ ಮಹಾನ ಪುರುಷರು. ಇವರು ರಚಿಸಿದ ಸಂವಿಧಾನದಿಂದ ಎಲ್ಲ ಸಮುದಾಯದವರು ಅಧಿಕಾರ ಅನುಭವಿಸುತ್ತಿದ್ದಾರೆಂದು ಹೇಳಿದರು. ಯರನಾಳದ ಬ್ರಹ್ಮಾನಂದ ಅಜ್ಜನವರು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಪ್ರಭಾಶುಗರದ ದಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು.
ಶಿವಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಶಂಕರ ಬಿಲಕುಂದಿ, ಮುತ್ತೆಪ್ಪ ಝಲ್ಲಿ, ಮನೋಹರ ಅಜ್ಜನಕಟ್ಟಿ, ನಿಂಗಪ್ಪ ಈಳಿಗೇರ, ರಾಯಪ್ಪ ಬಂಡಿವಡ್ಡಿರ, ಭೀಮಶಿ ಹಳ್ಳೂರ, ರಮೇಶ ಮಾದರ, ಸತ್ತೆಪ್ಪ ಬಡಾಯಿ, ಕೃಷ್ಣ ಬಂಡಿವಡ್ಡರ, ಗಣಪತಿ ಈಳಿಗೇರ, ರಿಯಾಜ ಯಾದವಾಡ, ಭೀರಪ್ಪ ಮೈಲನ್ನವರ, ಯಮನಪ್ಪ ಪೂಜೇರಿ, ಅಶೋಕ ಬಂಡಿವಡ್ಡರ ಉಪಸ್ಥಿತರಿದ್ದರು. ಬಸವರಾಜ ಮಾಳೇದವರ ಸ್ವಾಗತಿಸಿದರು. ಬಸು ಈಳಿಗೇರ ನಿರೂಪಿಸಿದರು. ಕುಮಾರ ಪೂಜೇರಿ ವಂದಿಸಿದರು.