ಬೆಳಗಾವಿ

ನೀಯೇನ್ ಬದ್ನೇಕಾಯಿ ಕೊಟ್ಯೇನ್...

ಸುವರ್ಣ ವಿಧಾನಸಭೆ: ನೀ ಏನ್ ಬದ್ನೇಕಾಯಿ ಕೊಟ್ಯೇನ್...
ಅಡಕೆ ಬೆಳೆಗಾರರಿಗೆ ಪರಿಹಾರ ವಿತರಣೆ ಕುರಿತಂತೆ ನಡೆದ ಚರ್ಚೆ ಸಂದರ್ಭದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ದೇಶಿಸಿ ಸಚಿವ ಆರ್.ವಿ. ದೇಶಪಾಂಡೆ ಕೇಳಿದ ಪ್ರಶ್ನೆ ಇದು.
ರೈತರ ಸಮಸ್ಯೆಗಳ ಕುರಿತು ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಸದನದಲ್ಲಿ ಪ್ರಸ್ತಾಪಿಸುತ್ತಾ ಅಡಕೆ ಬೆಳೆಗಾರರಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ರು. 830 ಕೋಟಿ ನಷ್ಟವಾದರೂ ಕೇವಲ ರು. 73 ಕೋಟಿ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸಚಿವ ಆರ್.ವಿ. ದೇಶಪಾಂಡೆ, ನಿನ್ನೆ ಕಾಗೇರಿ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಕೆ ಬೆಳೆ ಹಾನಿಯಾಗಿದ್ದಕ್ಕೆ ಪರಿಹಾರವನ್ನೇ ನೀಡಲಿಲ್ಲ ಎಂದು ಹೇಳಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರ ಅಡಕೆ ಬೆಳೆಗೆ ಪರಿಹಾರ ನೀಡಿದೆ. ಇದನ್ನು ಒಪ್ಪಿಕೊಳ್ಳುವ ಬದಲು ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ಹೇಳುವುದು ಎಷ್ಟು ಸರಿ. ಬಿಡುಗಡೆ ಮಾಡಿದ ಹಣವನ್ನು ತಮ್ಮ ಕೈಯಾರೆ (ತಾವೇ) ವಿತರಿಸಬೇಕೆಂಬ ಲೆಕ್ಕಾಚಾರದಲ್ಲಿ ಪರಿಹಾರ ವಿತರಣೆಗೆ ಅಡ್ಡಿಪಡಿಸುತ್ತಿರುವವರು ಸರ್ಕಾರದ ಮೇಲೇಕೆ ಆರೋಪ ಹೊರಿಸುತ್ತಿದ್ದೀರಿ ಎಂದು ಕಾಗೇರಿ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಣ ಕೊಟ್ಟೇ ಇಲ್ಲ ಎಂದು ನಾನು ಹೇಳಿಲ್ಲ. ಅಡಕೆಗೆ ಕೊಳೆ ರೋಗ ಬಂದು 14 ಕೋಟಿ ನಷ್ಟವಾಗಿದೆ. ರು. 7 ಕೋಟಿ ಪರಿಹಾರ ಮಾತ್ರ ಬಂದಿದೆ. ಉಳಿದ ಹಣ ಬಿಡುಗಡೆಯಾಗಿಲ್ಲ ಎಂದು ಮಾತ್ರ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವ ರಮಾನಾಥ ರೈ ಸೇರಿದಂತೆ ಕೆಲವು ಕಾಂಗ್ರೆಸ್ ಸದಸ್ಯರು ದೇಶಪಾಂಡೆ ಅವರ ಬೆಂಬಲಕ್ಕೆ ನಿಂತು ಕಾಗೇರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸಿಟ್ಟಿನ ಭರದಲ್ಲಿ ಜೋರು ದನಿಯಲ್ಲಿ ಮಾತನಾಡಿದ ದೇಶಪಾಂಡೆ ಅವರು, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಮಧ್ಯೆ ಸಮನ್ವಯ ಕೊರತೆಯಿಂದ ಹಣ ಬಿಡುಗಡೆಯಾಗುವಲ್ಲಿ ಸ್ವಲ್ಪ ವಿಳಂಬವಾಗಿರುವುದು ನಿಜ. ಈಗ ರು. 5 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ, ಅದನ್ನು ನನ್ನ ಕೈಯಿಂದಲೇ ನೀಡಬೇಕು ಎಂದು ಶಾಸಕರು (ಕಾಗೇರಿ) ಹೇಳುತ್ತಿರುವುದರಿಂದ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಕಿಡಿಕಾರಿದರು.
ಮತ್ತೆ ವಿವರಣೆ ನೀಡಿದ ಕಾಗೇರಿ, ಅಡಕೆ ಬೆಳೆಗಾರರಿಗೆ ಬೇಗ ಪರಿಹಾರ ಸಿಗಬೇಕು ಎಂಬುದು ನನ್ನ ಉದ್ದೇಶ. ನಿಮ್ಮ ಕೈಯ್ಯಿಂದಲೇ ವಿತರಿಸಿ. ಇತಿಹಾಸದಲ್ಲೇ ಮೊದಲ ಬಾರಿ ನಾವೇ ಪರಿಹಾರ ಕೊಟ್ಟವರು ಎಂದು ಬೀಗಬೇಡಿ. ನಮ್ಮ ಸರ್ಕಾರದ ಅವಧಿಯಲ್ಲೂ ಅಡಕೆ ಬೆಳೆಗಾರರಿಗೆ ಪರಿಹಾರ ಕೊಟ್ಟಿದ್ದೇವೆ ಎಂದು ತಿರುಗೇಟು ನೀಡಿದರು.
ಇದು ದೇಶಪಾಂಡೆ ಅವರನ್ನು ಇನ್ನಷ್ಟು ಕೆರಳಿಸಿತು. ಸುಮ್ನೆ ಸದನದಲ್ಲಿ ಸುಳ್ಳು ಹೇಳುವುದು ಸರಿಯಲ್ಲ ಎಂದು ಕಾಗೇರಿ ವಿರುದ್ಧ ಹರಿಹಾಯ್ದ ಅವರು, ನೀಯೇನ್ ಬದ್ನೇಕಾಯಿ ಕೊಟ್ಯೇನ್ ಎಂದು ಕಾಗೇರಿ ಅವರನ್ನು ಪ್ರಶ್ನಿಸಿದರು.
ಮಧ್ಯೆ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ದೇಶಪಾಂಡೆ ಅವರನ್ನು ಸಮಾಧಾನಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ