ಬಳ್ಳಾರಿ

ಕೋಟಿಗಟ್ಟಲೆ ಹಣ: ಅಭಿವೃದ್ಧಿ ಗೌಣ

 ಭೀಮಣ್ಣ ಗಜಾಪುರ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಫೆ. 23
ಈಗ ಪಟ್ಟಣದಲ್ಲಿ  ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಕಳೆದ ಬಾರಿ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪೂರ್ಣಾವಧಿ ಪೂರೈಸಿದ್ದರೂ, ಪಟ್ಟಣದ ಅಭಿವೃದ್ಧಿ ಮಾತ್ರ ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಚುನಾವಣೆ ಬಂದಾಗಷ್ಟೇ ಜನತೆ ನೆನಪಾಗುತ್ತಾರೆ ವಿನಃ ಉಳಿದ ದಿನಗಳಲ್ಲಿ ಜನತೆಯ ಮೂಲಭೂತ ಸಮಸ್ಯೆಗಳತ್ತ ಆಯ್ಕೆಯಾದ ಸದಸ್ಯರು ಬೆನ್ನು ಮಾಡುವುದು ಮಾತ್ರ ಸ್ಥಳೀಯರ ದುರಂತ.
ಇಲ್ಲಿನ ಪಪಂ ವ್ಯಾಪ್ತಿಯಲ್ಲಿ ಇಪ್ಪತ್ತು ವಾರ್ಡ್‌ಗಳಿವೆ. ಒಟ್ಟು 17,029 ಮತದಾರರಿದ್ದಾರೆ. ಸತತವಾಗಿ ಕೈ ಪಕ್ಷವೇ ಪಪಂನಲ್ಲಿ ಆಡಳಿತ ನಡೆಸಿದೆ. ಕಳೆದ ಸಲ ಕಾಂಗ್ರೆಸ್ 11, ಜೆಡಿಎಸ್ 5, ಬಿಜೆಪಿ 3  ಮತ್ತು ಪಕ್ಷೇತರ ಸದಸ್ಯರಾಗಿ ಓರ್ವ ಇದ್ದರು. ಕಾಂಗ್ರೆಸ್, ಜೆಡಿಎಸ್ ಜತೆಯಾಗಿ 17 ಸದಸ್ಯ ಬಲ ಪಡೆದು ಅಧಿಕಾರದ ಗದ್ದುಗೆಗೆ ಏರಿದ್ದವು. ಹೀಗಾಗಿ  ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಎಲ್ಲ ಪಕ್ಷಗಳಿಗಿಂತಲೂ ಅಧಿಕವಾಗಿದ್ದಾರೆ. ಪಕ್ಷದ ಅಧಿಕೃತ ಮಾಹಿತಿಯಂತೆ ಈಗಾಗಲೇ 43 ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ ಎಲ್ಲ ವಾರ್ಡ್‌ಗಳು ಸ್ವಲ್ಪ ಮಟ್ಟಿಗಾದರೂ ಅಭಿವೃದ್ಧಿ ಕಂಡಿವೆ. ಅದನ್ನೇ ಬಂಡವಾಳವಾಗಿಸಿಕೊಂಡ ಮಾಜಿ ಸದಸ್ಯರು ಈ ಬಾರಿಯೂ ಸ್ಪರ್ಧಿಸಲು ಪೈಪೋಟಿ ನಡೆಸುತ್ತಿದ್ದಾರೆ.
ಇವರೇ ಸದಸ್ಯರು: ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಕೆ. ಶಿವಪ್ಪ ನಾಯಕ, ಷಫೀವುಲ್ಲಾ, ಸೌಭಾಗ್ಯಮ್ಮ ಕೊತ್ಲಪ್ಪ, ಅಂಜಿನಮ್ಮ ಅಂಜಿನಪ್ಪ, ಎ.ಎಂ. ಖೈರೂನ್‌ಬೀ, ಬಸಂತಮ್ಮ ಕ್ಯಾರಿ ರಮೇಶ್,   ಡಿ.ಎಂ. ಇಸ್ಮಾಯಿಲ್, ಕೆ.ಕೆ. ಹಟ್ಟಿ ವೀರಣ್ಣ, ಡಿ.ಎಚ್. ನಿಂಗೇಶ್, ಕೆ. ಈಶಪ್ಪ, ಓಬಳಪ್ಪ. ಜೆಡಿಎಸ್‌ನಿಂದ ಸಿರಿಬಿ ಗೌರಮ್ಮ, ನೀರ್ಕಲ್ಲರ ನಾಗಜ್ಜ, ಸಿದ್ದಪ್ಪ, ಬಸಮ್ಮ ಸೊಲ್ಲಪ್ಪ, ಹುಸೇನ್‌ಪೀರಾ. ಬಿಜೆಪಿಯಿಂದ ಗುರುನಾಯ್ಕ, ಎಂ. ಶಶಿಕಲಾ, ಆಂಜನೇಯಲು. ಪಕ್ಷೇತರನಾಗಿ ಎಂ. ನಾಗರಾಜ್ ಸೇರಿ ಒಟ್ಟು 20 ಸದಸ್ಯರು ಕಳೆದ ಬಾರಿಯ ಚುನಾವಣೆಯಲ್ಲಿ ಆಯ್ಕೆಯಾಗಿ ಆಡಳಿತ ನಡೆಸಿದ್ದರು.
ಇವರಲ್ಲಿ ಕೆಲವರು ಅಭಿವೃದ್ಧಿ ಕಾರ್ಯ ಮಾಡಿದ್ದರೂ ಇನ್ನೂ ಕೆಲವರು ಜನತೆಯ ಸಮಸ್ಯೆಗಳತ್ತ ಮುಖಮಾಡದೇ ಅಧಿಕಾರ ಅನುಭವಿಸಿದವರೂ ಇದ್ದಾರೆ ಎಂಬುದನ್ನು ಇಲ್ಲಿಯ ಜನತೆ ನೊಂದು ನುಡಿಯುತ್ತಾರೆ. ಅಧಿಕಾರದ ಅವಧಿಯಲ್ಲಿಯೇ  ಕಾಂಗ್ರೆಸ್ ಸದಸ್ಯರಾದ ಓಬಳಪ್ಪ ಹಾಗೂ ಡಿ.ಎಚ್. ನಿಂಗೇಶ್ ಅಕಾಲಿಕ ಮರಣವನ್ನಪ್ಪಿದ್ದಾರೆ.
ನಾಮಫಲಕಕ್ಕೂ ಗತಿ ಇಲ್ಲ: ಪಟ್ಟಣದ ಅಭಿವೃದ್ಧಿಗೆ ಕಳೆದ 5 ವರ್ಷಗಳಲ್ಲಿ ಕೋಟಿಗಟ್ಟಲೇ ಅನುದಾನ ಬಿಡುಗಡೆಯಾಗಿದ್ದರೂ ಮುಖ್ಯ ರಸ್ತೆ  ಹೈಟೆಕ್ ಆಗಿದ್ದು ಬಿಟ್ಟರೆ, ಉಳಿದಂತೆ ಬಹುತೇಕ ಕಚ್ಚಾ ರಸ್ತೆಗಳೇ ಇಲ್ಲಿ ಕಾಣುತ್ತವೆ. ಕೂಡ್ಲಿಗಿಯಲ್ಲಿ ದಕ್ಷಿಣ ಭಾರತಲ್ಲಿಯೇ ಎಲ್ಲೂ ಸಿಗದ ಗಾಂಧೀಜಿ ಚಿತಾಭಸ್ಮ ಇರುವ ಹುತಾತ್ಮರ ಸ್ಮಾರಕ ಇದ್ದರೂ ಪ್ರವಾಸಿಗರಿಗೆ ಅನುಕೂಲವಾಗಲು ಪಟ್ಟಣದ ನಾಲ್ಕು ದಿಕ್ಕುಗಳ ರಸ್ತೆಗಳಲ್ಲಿ ನಾಮಫಲಕಗಳನ್ನು ಹಾಕಲು ಸಹ ಪಟ್ಟಣ ಪಂಚಾಯ್ತಿ ಮುಂದಾಗಿಲ್ಲ. ಇದನ್ನು ಗಮನಿಸಿದರೆ ಇಲ್ಲಿಯ ಆಡಳಿತ ವೈಖರಿ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೆಲ ವಾರ್ಡ್‌ಗಳಲ್ಲಿ ಸದಸ್ಯರು ಶ್ರದ್ಧೆಯಿಂದ ಕಾರ್ಯನಿರ್ವಹಿಸಿದ್ದರೆ, ಇನ್ನೂ ಕೆಲ ವಾರ್ಡ್‌ಗಳಲ್ಲಿ ಮೂಗುಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ ಹಾಕಿದ ಮತದಾರರು ನಿತ್ಯ ಪಪಂಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮಳೆಗಾಲ ಬಂದರೆ ಅಂಬೇಡ್ಕರ್‌ನಗರ ಸೇರಿದಂತೆ ಕೆಲ ಭಾಗಗಳಲ್ಲಿ ರಸ್ತೆಯಲ್ಲಿ ಹೊಲಸು ತುಂಬಿದ ಗುಂಡಿಗಳು ನಿರ್ಮಾಣವಾಗಿ, ಹಂದಿ, ನಾಯಿಗಳೇ ವಾಸಿಸುವ ಕಲ್ಮಶ ವಾತಾವರಣ ನಿರ್ಮಾಣವಾಗುತ್ತದೆ. ರಾಜೀವ್‌ಗಾಂಧಿ ನಗರದಲ್ಲಿಯ ಚರಂಡಿ ನೀರು ಎಲ್ಲಿಯೂ ಹೋಗಲು ಸೂಕ್ತ  ವ್ಯವಸ್ಥೆ ಇಲ್ಲದೆ ಮನೆಗಳ ಮುಂದೆಯೇ ಚರಂಡಿ ತುಂಬಾ ನೀರು ನಿಂತು ಸೊಳ್ಳೆಗಳ ರಾಜಧಾನಿಯಾಗುತ್ತದೆ. ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೂ ಸೂಕ್ತ ಸ್ಥಳವಿಲ್ಲದೆ ಮುಖ್ಯ ರಸ್ತೆಯಲ್ಲಿ ನಡೆಯುತ್ತದೆ. ಈ ಬಾರಿ ಆಯ್ಕೆಯಾಗುವ ಸದಸ್ಯರಾದರೂ ಸಂತಗೆ ಸೂಕ್ತ ಜಾಗ ಒದಗಿಸಲು ಮುಂದಾಗುತ್ತಾರೆಯೇ ಎಂಬುದನ್ನು ಮತದಾರರು ನಿರೀಕ್ಷಿಸುತ್ತಿದ್ದಾರೆ. 1 ಮತ್ತು 2ನೇ ವಾರ್ಡ್ ಸೇರಿದಂತೆ ಕೆಲ ವಾರ್ಡ್‌ಗಳಲ್ಲಿ ಮಾತ್ರ ಸ್ವಲ್ಪ ಶುಚಿತ್ವ ಕಾಣಬಹುದು.
ಮೂತ್ರಾಲಯ ಎಲ್ಲಿ ಸ್ವಾಮಿ?: ಪಟ್ಟಣದ ಅಭಿವೃದ್ಧಿಗಾಗಿ ಬಿಡುಗಡೆಯಾದ ಲಕ್ಷಗಟ್ಟಲೆ ಹಣ ಇಲ್ಲಿ ಲೆಕ್ಕವಿಲ್ಲ. ಬರುವುದು ಕೋಟಿ, ಕೋಟಿ ಅನುದಾನ ಆದರೆ ಪಟ್ಟಣಕ್ಕೆ ಹಳ್ಳಿಗಳಿಂದ ಬಂದ ಜನತೆಗೆ ಹಾಗೂ ಪಟ್ಟಣದ ಜನತೆಗೆ ಪಟ್ಟಣ ಪಂಚಾಯ್ತಿ ವತಿಯಿಂದ ಎಲ್ಲಿಯೂ ಮೂತ್ರಾಲಯ ನಿರ್ಮಿಸುವ ಗೋಜಿಗೆ ಹೋಗಿಲ್ಲ. ಪಪಂ ಮೂತ್ರಾಲಯವೇ ಅವ್ಯವಸ್ಥೆಯ ತಾಣವಾಗಿದೆ. ಪಟ್ಟಣದಲ್ಲಿ ನಾಲ್ಕಾರು ಕಡೆ ಜನನಿಬಿಡ ಸ್ಥಳಗಳಲ್ಲಿ  ಶೌಚಾಲಯ ನಿರ್ಮಿಸಲು ಮುಂದಾಗದೇ ಇರುವುದನ್ನು ನೋಡಿದರೆ ಇಲ್ಲಿ ಪಟ್ಟಣ ಪಂಚಾಯ್ತಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್