ಬಳ್ಳಾರಿ: ನಗರದ ಹೃದಯ ಭಾಗದಲ್ಲಿರುವ ಕನಕದುರ್ಗಮ್ಮ ದೇವಸ್ಥಾನದ ಹಿಂಭಾಗದಲ್ಲಿನ ರೇಣುಕಾ ಬೇಕರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೇಕರಿ ತಿನಿಸು ಉತ್ಪಾದಿಸುವ ಯಂತ್ರಗಳು ಸೇರಿದಂತೆ ಸುಮಾರು ರು. 20 ಲಕ್ಷಕ್ಕೂ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ.
ಹರೀಶ್ ಶೆಟ್ಟಿ ಅವರಿಗೆ ಸೇರಿದ ಬೇಕರಿಯಾಗಿದ್ದು, ರಾತ್ರಿ ಕಟ್ಟಡದ ಬಾಗಿಲು ಹಾಕಿಕೊಂಡು ಹೋಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟಾಗಿದೆ. ಬೇಕರಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬ್ರೆಡ್, ಕೇಕ್, ಸಿಹಿ ತಿಂಡಿ ತಯಾರಿಸುವ ರು. 9 ಲಕ್ಷ ಮೌಲ್ಯದ ಯಂತ್ರಗಳು, ನಾಲ್ಕು ಫ್ರಿಜ್ ಸೇರಿದಂತೆ ಸಿಹಿ ತಿನಿಸುಗಳು, ತಂಪು ಪಾನೀಯಗಳು, ಐಸ್ ಕ್ರೀಂಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಕಾಣಿಸಿಕೊಂಡ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ದಳವು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.