ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಭಾನುವಾರ 33 ಕ್ರಸ್ಟ್ ಗೇಟ್‌ಗಳ ಮೂಲಕ 1.91 ಲಕ್ಷ ಕ್ಯುಸೆಕ್ ನೀರು ನದಿಗೆ ನೀರು ಬಿಡಲಾಗಿದೆ. ಶನಿವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೆ ಜಲಾಶಯದಿಂದ 1,74,344 ಕ್ಯುಸೆಕ್ ನೀರು ನದಿಗೆ ಬಿಡಲಾಗಿತ್ತು. ಆದರೆ, ಭಾನುವಾರ ಮಧ್ಯಾಹ್ನ 1ರಿಂದ ಜಲಾಶಯದ 33 ಕ್ರಸ್ಟ್ ಗೇಟ್‌ಗಳಲ್ಲಿ 28 ಗೇಟ್ ನಾಲ್ಕುವರೆ ಅಡಿ, 5 ಗೇಟ್ ಒಂದೂವರೆ ಅಡಿ ಎತ್ತರಿಸಿ 1,90,602 ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಶನಿವಾರದಿಂದ ಭಾನುವಾರದ ಮಧ್ಯಾಹ್ನದವರೆಗೆ 1.74 ಲಕ್ಷ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯದಿಂದ 1.91 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಹಂಪಿಯ ಪುರಂದರದಾಸರ ಮಂಟಪ, ಕೆಲ ಮಂಟಪ, ಸ್ಮಾರಕಗಳು ಸಂಪೂರ್ಣ ಮುಳುಗಿವೆ.
ಹಂಪಿಯ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದಿಂದ ಕೋದಂಡರಾಮ ದೇವಸ್ಥಾನದ ಮೂಲಕ ವಿಜಯ ವಿಠ್ಠಲದ ದೇವಸ್ಥಾನಕ್ಕೆ ತೆರಳುವಂತಹ ದಾರಿ ಮುಳುಗಡೆಯಾಗಿದೆ. ವಿಠ್ಠಲ ದೇವಸ್ಥಾನಕ್ಕೆ ತೆರಳಲು ಪ್ರವಾಸಿಗರು ಕಮಲಾಪುರಕ್ಕೆ ತೆರಳಿ ಮತ್ತು ಕಮಲಾಪುರದಿಂದ ಯಂಡಮಾರುವ ಗುಂಡಿನ ಮುಂಭಾಗದಿಂದ ತಳವಾರಘಟ್ಟಕ್ಕೆ ತೆರಳುವ ರಸ್ತೆಯಲ್ಲಿ ತೆರಳಿ ವಿಠ್ಠಲ ದೇವಸ್ಥಾನ ಹಾಗೂ ಕಲ್ಲಿನ ತೇರನ್ನು ವೀಕ್ಷಿಸಬಹುದಾಗಿದೆ. ಆದರೆ, ಹಂಪಿಗೆ ಬರುವ ಪ್ರವಾಸಿಗರಲ್ಲಿ ವಾಹನಗಳನ್ನು ತಂದವರು ಹಂಪಿಯ ವಿರೂಪಾಕ್ಷೇಶ್ವರಸ್ವಾಮಿಯ ದರ್ಶನ ಪಡೆದುಕೊಂಡು ನಂತರ ಕಮಲಾಪುರಕ್ಕೆ ತೆರಳಿ ವಿಜಯವಿಠ್ಠಲ ದೇವಸ್ಥಾನಕ್ಕೆ ತೆರಳುತ್ತಾರೆ. ಆದರೆ, ಬಸ್‌ನಲ್ಲಿ ಬಂದ ಪ್ರವಾಸಿಗರು ಹಂಪಿಗೆ ಬಂದು ಮತ್ತು ಹಂಪಿಯಿಂದ ಕಮಲಾಪುರಕ್ಕೆ ತೆರಲಿ ವಿಜಯವಿಠ್ಠಲ ದೇವಸ್ಥಾನಕ್ಕೆ ತೆರಳಬೇಕು. ಹಂಪಿಯಿಂದ ಮತ್ತು ಕಮಲಾಪುರದಿಂದ ವಿಜಯವಿಠ್ಠಲ ದೇವಸ್ಥಾನಕ್ಕೆ ತೆರಳಲು ಹೆಚ್ಚಿನ ಬಸ್‌ಗಳ ವ್ಯವಸ್ಥೆ ಕಲ್ಪಿಸಿದಾಗ ಮಾತ್ರ ಹಂಪಿ ವಿಜಯ ವಿಠ್ಠಲ ದೇವಸ್ಥಾನವನ್ನು ವೀಕ್ಷಿಸಲು ಸಾಧ್ಯವಾಗಲಿದೆ ಎಂದು ಪ್ರವಾಸಿಗರ ಅಂಬೋಣ.
ನದಿ ದಂಡೆಯ ಕೆಲ ಹೊಲ-ಗದ್ದೆಗಳಿಗೆ ನದಿ ನೀರು ನುಗ್ಗಿದ್ದು ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿದೆ. ನದಿ ಪಕ್ಕದಲ್ಲಿರುವ ಗದ್ದೆಗಳ ಪಂಪ್‌ಸೆಟ್‌ಗಳು ನೀರಿನಲ್ಲಿ ಮುಳುಗಿವೆ. ತುಂಗಭದ್ರಾ ನದಿಯ ದಡದಲ್ಲಿರುವ ಕೆಲ ಗ್ರಾಮಗಳ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.