ಬಳ್ಳಾರಿ: ಬಳ್ಳಾರಿ ಗ್ರಾಮೀಣ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶ್ರೀರಾಮುಲು ಆಪ್ತ ಸಹಾಯಕ ಓಬಳೇಶ್ ಅವರು 66 ತೊಲೆ ಬಂಗಾರ, ಒಂದು ಮನೆ, ಕೃಷಿ ಭೂಮಿ, ಕೃಷಿಯೇತರ ಭೂಮಿ ಸೇರಿದಂತೆ ಹಾಗೂ ಅವರ ಪತ್ನಿ, ಮಕ್ಕಳ ಹೆಸರಿನಲ್ಲಿ ಒಟ್ಟು ರು. 1.60 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಇವರಿಗೆ ಕಾರಿಲ್ಲ, ಕೇವಲ ಬೈಕ್‌ನ್ನು ಮಾತ್ರ ಹೊಂದಿದ್ದಾರೆ. ಇನ್ನು ಅಭ್ಯರ್ಥಿ ಹೆಸರಿನಲ್ಲಿ ರು. 4.35 ಲಕ್ಷ ಸಾಲ, ಹೆಂಡತಿ ಹೆಸರಿನಲ್ಲಿ ರು. 6.31 ಲಕ್ಷ ಸಾಲ ಹೊಂದಿದ್ದಾರೆ ಎಂದು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಮಾಹಿತಿ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಓಬಳೇಶ್ ರು. 50 ಸಾವಿರ ನಗದು ಹೊಂದಿದ್ದರೆ, ಕೆನರಾ ಬ್ಯಾಂಕಿನ ಒಂದು ಖಾತೆಯಲ್ಲಿ ರು. 4661 ಹಾಗೂ ಮತ್ತೊಂದು ಖಾತೆಯಲ್ಲಿ ರು. 36,681 ಹೊಂದಿದ್ದಾರೆ, ಐಸಿಐಸಿಐನಲ್ಲಿ ರು. 1 ಲಕ್ಷ ಬೆಲೆಯ ಬಾಂಡ್, ರು. 92,500 ಕೆಜಿಐಡಿ ಪಾಲಿಸಿ, ಎಲ್‌ಐಸಿಯಲ್ಲಿ ರು. 50 ಸಾವಿರ ಮೌಲ್ಯದ ಒಂದು ವಿಮಾ ಪಾಲಿಸಿ, ಲಕ್ಷ ರು. ಮೌಲ್ಯದ ಎರಡು ವಿಮಾ ಪಾಲಿಸಿ ಹೊಂದಿದ್ದಾರೆ. ರು. 17 ಸಾವಿರ ಮೌಲ್ಯದ ಒಂದು ಸೂಪರ್ ಸ್ಪೈಂಡರ್ ಬೈಕ್, ರು. 2.43 ಲಕ್ಷ ಮೌಲ್ಯದ 9 ತೊಲೆ ಬಂಗಾರ, ರು. 51,600 ಮೌಲ್ಯದ 1200 ಗ್ರಾಂ ಬೆಳ್ಳಿ ಹೊಂದಿದ್ದಾರೆ. ಒಟ್ಟು ರು. 84,98,408 ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು ಬಂಡಿಹಟ್ಟಿ, ಗುಗ್ಗರಹಟ್ಟಿಯಲ್ಲಿ ರು. 4.10 ಲಕ್ಷ ಮೌಲ್ಯದ ಎರಡು ನಿವೇಶನ, ಸಂಜಯ್ ಗಾಂಧಿ ನಗರದಲ್ಲಿ ರು. 30.60 ಲಕ್ಷ ಮೌಲ್ಯದ ಒಂದು ಮನೆ ಹೊಂದಿದ್ದಾರೆ. ಒಟ್ಟಾರೆ ಚರ ಮತ್ತು ಸ್ಥಿರಾಸ್ತಿ ಸೇರಿ ರು. 1,19,68,408 ಹೊಂದಿದ್ದಾರೆ. ಇನ್ನು ಕೆನರಾ ಬ್ಯಾಂಕ್‌ನಲ್ಲಿ ರು. 4,35,659 ಸಾಲ ಹೊಂದಿದ್ದಾರೆ.
ಪತ್ನಿ ರೇಣುಕಾ ಆಸ್ತಿ ವಿವರ: ಓಬಳೇಶ್ ಪತ್ನಿ ರೇಣುಕಾ ಅವರ ಹತ್ತಿರ ರು. 5 ಸಾವಿರ ನಗದು, ಕೆನರಾ ಬ್ಯಾಂಕಿನ ಒಂದು ಖಾತೆಯಲ್ಲಿ ರು. 2,01,222, ಇನ್ನೊಂದು ಖಾತೆಯಲ್ಲಿ ರು. 85, ಎಚ್‌ಎಸ್‌ಬಿಸಿಯಲ್ಲಿ ರು. 2.57 ಲಕ್ಷ ಮೌಲ್ಯದ ಒಂದು ವಿಮಾ ಪಾಲಿಸಿ, 40 ಸಾವಿರ ಮೌಲ್ಯದ ಹೊಂಡಾ ಆಕ್ವಿವ್ ಹೊಂಡಾ, ರು. 12.15 ಲಕ್ಷ ಮೌಲ್ಯದ 45 ತೊಲೆ ಬಂಗಾರ ಸೇರಿ ಒಟ್ಟು ರು. 12,72,258 ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ. ಸ್ಥಿರಾಸ್ತಿ ನೋಡುವುದಾದರೆ, ನಾಗೇನಹಳ್ಳಿ ಬಿ. ಬೆಳಗಲ್ ಗ್ರಾಮದಲ್ಲಿ ರು. 3.25 ಲಕ್ಷ ಮೌಲ್ಯದ 5.5 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಬಳ್ಳಾರಿಯ ಕುವೆಂಪು ನಗರದಲ್ಲಿ ರು. 6 ಲಕ್ಷ ಮೌಲ್ಯ ನಿವೇಶನ ಹೊಂದಿದ್ದಾರೆ. ಪತ್ನಿ ರೇಣುಕಾ ಹೆಸರಿನಲ್ಲಿ ಸ್ಥಿರ ಮತ್ತು ಚರಾಸ್ತಿ ಸೇರಿ ರು. 36,97, 258 ಹೊಂದಿದ್ದಾರೆ. ಕೆನರಾ ಬ್ಯಾಂಕಿನಲ್ಲಿ ರು. 6,31,539 ಸಾಲ ಹೊಂದಿದ್ದಾರೆ.
ಮಕ್ಕಳ ಹೆಸರಿನ ಆಸ್ತಿ: ಓಬಳೇಶ್ ಅವರ ಮಗ ಬಾಬು ರಾಹುಲ್ ಹೆಸರಿನಲ್ಲಿ ಕೆನರಾ ಬ್ಯಾಂಕಿನ ಖಾತೆಯಲ್ಲಿ ರು. 37,619 ಡಿಪಾಜಿಟ್, ರು. 1.89 ಲಕ್ಷ ಮೌಲ್ಯದ 7 ತೊಲೆ ಬಂಗಾರ ಸೇರಿದಂತೆ ಒಟ್ಟು ರು. 2,26,619 ಆಸ್ತಿ ಹೊಂದಿದ್ದಾರೆ. ಮಗಳು ಭವನಶ್ರೀ ಹೆಸರಿನಲ್ಲಿ ಕೆನರಾ ಬ್ಯಾಂಕಿನ ಖಾತೆಯಲ್ಲಿ ರು. 37,619 ನಗದು, ರು. 1,48,500 ಮೌಲ್ಯದ 5.5 ತೊಲೆ ಬಂಗಾರ ಸೇರಿದಂತೆ ಒಟ್ಟು ರು. 1,86,119 ಮೌಲ್ಯದ ಆಸ್ತಿ ಹೊಂದಿದ್ದಾರೆ. ಒಟ್ಟಾರೆ ಓಬಳೇಶ್, ಪತ್ನಿ ರೇಣುಕಾ, ಪುತ್ರ ಬಾಬುರಾಹುಲ್, ಪುತ್ರಿ ಭವನಶ್ರೀ ಹೆಸರಿನಲ್ಲಿ ಸ್ಥಿರ, ಚರ ಆಸ್ತಿ ಸೇರಿ ರು. 1,60,78,404 ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ ತಿಳಿಸಿದ್ದಾರೆ.