ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಹೋಬಳಿಯ ಹತ್ತಾರು ಹಳ್ಳಿಗಳಲ್ಲಿ ಆರಣ್ಯ ಪ್ರದೇಶದ ಹತ್ತಿರದಲ್ಲಿರುವ ನೂರಾರು ಎಕರೆ ಜಮೀನುಗಳಿಗೆ ಕರಡಿ, ಹಂದಿಗಳು ನುಗ್ಗಿ ಇತ್ತೀಚೆಗೆ ಬಿತ್ತನೆ ಮಾಡಿದ್ದ ಶೇಂಗಾ ಬೀಜಗಳನ್ನು ತಿಂದು ನಾಶ ಮಾಡಿರುವುದರಿಂದ ಜಮೀನಿನ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ
ರೈತರು ಸಾಲಸೂಲ ಮಾಡಿ ತಮ್ಮ ಜಮೀನಿನಲ್ಲಿ ಸಾವಿರಾರು ರು. ಖರ್ಚು ಮಾಡಿ ಬಿತ್ತನೆ ಮಾಡಿದ್ದಾರೆ. ಆದರೆ, ಕಾಡು ಪ್ರಾಣಿಗಳು ಆಹಾರಕ್ಕಾಗಿ ರೈತರ ಹೊಲಗಳಿಗೆ ನುಗ್ಗಿ ಬಿತ್ತನೆ ಬೀಜಗಳನ್ನು ಸಾಲು ಹಿಡಿದು ತಿಂದು ನಾಶ ಮಾಡಿರುವುದಲ್ಲದೆ ಇತರೇ ಬೆಳೆಗಳನ್ನು ನಾಶ ಮಾಡಿವೆ.
ಭೀಮಸಮುದ್ರ ಗ್ರಾಮದ ಬಸವರಾಜಪ್ಪ ಮಾತನಾಡಿ, ನಮ್ಮ ಜಮೀನಿನಲ್ಲಿ ಸುಮಾರು ಒಂದು ಕ್ವಿಂಟಲ್ ಶೇಂಗಾ ಬಿತ್ತನೆ ಮಾಡಿದ್ದೆ. ಆದರೆ ಕರಡಿ, ಹಂದಿಗಳು ಜಮೀನಿಗೆ ಬಂದು ತಿಂದು ಸಂಪೂರ್ಣ ನಾಶ ಮಾಡಿವೆ ಮತ್ತು ರಾತ್ರಿ ಸಮಯದಲ್ಲಿ ಜಮೀನಿಗೆ ಕಾವಲು ಕಾಯಲು ಹೋದ್ರೆ ಪ್ರಾಣಿಗಳು ನಮ್ಮ ಮೇಲೆ ದಾಳಿ ಮಾಡ್ತವೆ. ಹೀಗಾಗಿ ನಾವು ಕೆಲ ದಿನಗಳಿಂದ ಜಮೀನಿಗೆ ಹೋಗುವುದು ಬಿಟ್ಟಿದ್ದೇವೆ ಎಂದರು. ತಾಲೂಕಿನ ಭೀಮಸಮುದ್ರ, ಕಡೇಕೊಳ್ಳ, ಕರಡಿಹಳ್ಳಿ, ಹುಲಿಕುಂಟೆ ಗ್ರಾಮಗಳು ಸೇರಿದಂತೆ ಹತ್ತಾರು ಗ್ರಾಮಗಳ ರೈತರು ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಗುಡೇಕೋಟೆಯಲ್ಲಿ ಕರಡಿಧಾಮ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸರ್ಕಾರ ಬೇಗನೆ ಕರಡಿಧಾಮ ನಿರ್ಮಿಸಿದರೆ ರೈತರ ನಷ್ಟ ತಪ್ಪಬಹುದು.