ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 3
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಟಿಕೆಟ್ ಹಂಚಿಕೆಯ ಭಿನ್ನಾಭಿಪ್ರಾಯ ಅಭ್ಯರ್ಥಿಗಳ ಸೋಲು, ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಇಂತಹ ಭಿನ್ನಾಭಿಪ್ರಾಯ ಯಾವ ಪಕ್ಷಕ್ಕೆ ಮಾರಕವಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಭಿನ್ನಮತವನ್ನು ಡಿ.ಕೆ. ಶಿವಕುಮಾರ್ ಯಾವ ರೀತಿ ಶಮನಗೊಳಿಸುತ್ತಾರೆ ಎಂಬ ಆಧಾರದ ಮೇಲೆ ಚುನಾವಣೆ ಕದನ ಕಣ ರಂಗೇರಲಿದೆ. ಇನ್ನು ಬಿಜೆಪಿ ಉಸ್ತುವಾರಿಯನ್ನು ಆರ್. ಅಶೋಕ್ ವಹಿಸಿಕೊಂಡಿದ್ದರೂ ಭಿನ್ನಮತ ಶಮನದಲ್ಲಿ ಶ್ರೀರಾಮುಲು ಪಾತ್ರವೇ ಪ್ರಮುಖವಾಗಿದೆ.
ಡಿಕೆಶಿ ತಂತ್ರವೇನು?: ಸ್ಥಳೀಯರಿಗೆ ಟಿಕೆಟ್ ಕೊಟ್ಟಿಲ್ಲ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿ ಧ್ವಂಸಕ್ಕೆ ಕಾರಣವಾಗಿತ್ತು. ಕೈ ಅಭ್ಯರ್ಥಿ ಆಯ್ಕೆಯಲ್ಲಿ ಬಳ್ಳಾರಿಯ ಪ್ರಮುಖ ಮುಖಂಡರ ಅಭಿಪ್ರಾಯ ಪಡೆದಿಲ್ಲ ಎಂಬ ಅಸಮಾಧಾನವು ಸಾಕಷ್ಟಿದೆ. ಈ ಬಾರಿ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ಡಿಕೆಶಿ ಅವರು ಕಾಂಗ್ರೆಸ್ ಮುಖಂಡರನ್ನು ಮನಮೊಲಿಸಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಮುಖಂಡರ ಮನೆಗಳಿಗೆ ಡಿಕೆಶಿ ಭೇಟಿ: ಈಗಾಗಲೇ ಸ್ಥಳೀಯರಿಗೆ ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಟಿಕೆಟ್ ಆಕಾಂಕ್ಷಿಗಳು, ಪಕ್ಷದ ಹಿರಿಯ ಮುಖಂಡರು ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಆ ಎಲ್ಲ ಮುಖಂಡರ ಮನೆಗೆ ಭೇಟಿ ಕೊಡುವ ಮೂಲಕ ಭಿನ್ನಮತ ಶಮನಗೊಳಿಸಲು ಯತ್ನಿಸುತ್ತಿದ್ದಾರೆ.
ಯಾರ ಬಂಡಾಯ, ಯಾರಿಗೆ ಲಾಭ: ಕಳೆದ ಎರಡು ದಿನಗಳಿಂದ ಡಿ.ಕೆ. ಶಿವಕುಮಾರ್ ಅವರು ಬಳ್ಳಾರಿಯಲ್ಲಿ ಬೀಡು ಬಿಟ್ಟಿದ್ದಾರೆ.
ಮೊದಲು ತಮ್ಮ ಮನೆಯನ್ನು ಸರಿ ಮಾಡಿಕೊಂಡು ಚುನಾವಣೆ ಪ್ರಚಾರದ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ.