ಕನ್ನಡಪ್ರಭ ವಾರ್ತೆ, ಸಂಡೂರು, ಆ. 4
ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ, ತಾಲೂಕಿನ ಬಿಜೆಪಿ ರೈತ ಮೋರ್ಚಾದಿಂದ ಸೋಮವಾರ ಪಟ್ಟಣದ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ತಾಲೂಕು ಅಧ್ಯಕ್ಷ ಶ್ರೀಕಾಂತ್ ಗೊಂದಿ ಮಾತನಾಡಿ, ಅನಿಯಮಿತ ಲೋಡ್ ಶೆಡ್ಡಿಂಗ್, ಕನಿಷ್ಠ 8 ಗಂಟೆ 3 ಫೇಸ್ ವಿದ್ಯುತ್ ನೀಡುತ್ತಿಲ್ಲ. ಸುಟ್ಟು ಹೋದ ಟ್ರಾನ್ಸ್ಫಾರ್ಮ್ಗಳನ್ನು ಬದಲಾಯಿಸದೇ ಇರುವುದು, ರೈತರ ಪಂಪ್ಸೆಟ್ಗಳಿಗೆ ಅಗತ್ಯ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದರು. ಮೂರ್ನಾಲ್ಕು ದಶಕಗಳಿಂದಿರುವ ಹಳೆಯದಾಗಿರುವ ತಂತಿ ಮತ್ತು ಕಂಬಗಳನ್ನು ಬದಲಾಯಿಸಬೇಕು, ಅಗತ್ಯ ಲೈನ್ಮೆನ್ ಮತ್ತು ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು, ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮಗೊಳಿಸುವುದು ನಮ್ಮ ಮೂಲ ಬೇಡಿಕೆಯಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಪ್ರತಿಭಟನಾಕಾರರು ಜೆಸ್ಕಾಂ ಅಧಿಕಾರಿ ಕೆ.ಎ. ಉಮೇಶ್ ಕುಂಬಾರ್ಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಮೋರ್ಚಾ ಅಧ್ಯಕ್ಷ ಬಳ್ಳಿಕಟ್ಟಿ ಕುಮಾರಸ್ವಾಮಿ, ಪಿ.ವಿ. ಶ್ರೀನಿವಾಸ್, ರಾಜು, ಹಿರಿಯ ವಕೀಲ ಸಿದ್ದಪ್ಪ, ಮಾಜಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಕುಮಾರ್ ನಾಯ್ಕ, ಅಂಬರೀಶ್, ಪಿ. ರಾಜು, ಬಂಗಾಳಿ ಪಂಪಣ್ಣ, ವಕೀಲರಾದ ಸಿದ್ದಪ್ಪ, ಟಿ. ರಘು ಇತರರಿದ್ದರು.
ಲಾರಿ ಡಿಕ್ಕಿ: ಸವಾರ ಸಾವು
ಹೊಸಪೇಟೆ: ಬೈಕ್ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಡಣಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ-13 ರಸ್ತೆಯಲ್ಲಿ ಸೋಮವಾರ ಸಂಜೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ನಿವಾಸಿಯಾದ ಸತೀಶ (33) ಸ್ಥಳದಲ್ಲೇ ಮೃತ ವ್ಯಕ್ತಿ. ಹೊಸಪೇಟೆ ಕಡೆಯಿಂದ ಮರಿಯಮ್ಮನಹಳ್ಳಿ ಕಡೆಗೆ ಬೈಕ್ನಲ್ಲಿ ಬರುವಾಗ ಹಿಂದಿನಿಂದ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಹರಪನಹಳ್ಳಿ ಕೆಎಸ್ಆರ್ಟಿಸಿ ಬಸ್ ಡಿಪೋನಲ್ಲಿ ಚಾಲಕ ಮತ್ತು ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೋ ಕೆಲಸದ ಮೇಲೆ ಹೊಸಪೇಟೆಗೆ ಬಂದು ವಾಪಸು ಹರಪನಹಳ್ಳಿಗೆ ಹೋಗುವಾಗ ಡಣಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ-13 ರಸ್ತೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.