ಸಿರುಗುಪ್ಪ: ಕೃಷಿ ವಿಶ್ವವಿದ್ಯಾಲಯ ರಾಯಚೂರು, ಪಿ.ಐ. ಇಂಡಸ್ಟ್ರೀಸ್ ಲಿಮಿಟೆಡ್ ಗುರಗಾಂವ್ ಮತ್ತು ಕೃಷಿ ಸಂಶೋಧನ ಕೇಂದ್ರ ಸಿರುಗುಪ್ಪ ಇವರ ಸಹಯೋಗದಲ್ಲಿ ಇಲ್ಲಿನ ಕೃಷಿ ಸಂಶೋಧನಾ ಕೇಂದ್ರದಲ್ಲಿ, ನೇರ ಭತ್ತ ಬಿತ್ತನೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಕೃಷಿ ಕೇಂದ್ರದ ಮುಖ್ಯಸ್ಥ ಡಾ. ರವಿಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭತ್ತದ ಸಸಿ ನೀರಿನಲ್ಲಿ ಬೆಳೆಯುವ ಸಸ್ಯವಲ್ಲ. ಆದರೆ ಹೆಚ್ಚಿನ ನೀರನ್ನು ತಡೆದುಕೊಳ್ಳುವ ಗುಣ ಭತ್ತದ ಸಸಿಗೆ ಇದೆ. ಕಡಿಮೆ ತೇವಾಂಶದಲ್ಲಿಯೂ ಭತ್ತವನ್ನು ಚೆನ್ನಾಗಿ ಬೆಳೆಯಬಹುದು ಎಂದು ತಿಳಿಸಿದರು.
ರೈತರು ಭತ್ತವನ್ನು ನೀರು ನಿಲ್ಲಿಸಿ ಬೆಳೆಯುವುದರಿಂದ ಭತ್ತದ ಸಸಿ ಭೂಮಿಯಿಂದ ಪಡೆಯುವ ಎಲ್ಲ ಪೋಷಕಾಂಶಗಳೆಲ್ಲವನ್ನು ತನ್ನಲ್ಲಿ ಉಳಿಸಿಕೊಳ್ಳುತ್ತದೆ. ನಿಂತ ನೀರಿನಲ್ಲಿ ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಿಸಿದಾಗ ತಗ್ಗು ಪ್ರದೇಶದಲ್ಲಿ ಹರಿದು ಹೋದ ನೀರು ಆವಿಯಾಗಿ ಭೂಮಿಯಲ್ಲಿರುವ ರಾಸಾಯನಿಕ ಲವಣಗಳೆಲ್ಲವು ಭೂಮಿಯ ಮೇಲ್ಗಡೆ ಬಂದು ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ.
ಕೇಂದ್ರದ ಡಾ. ಬಸವಣೆಪ್ಪ ಮಾತನಾಡಿದರು. ರೈತ ರಾಮಲಿಂಗಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಲಕ್ಷ್ಮಿ ಕಾಂತರೆಡ್ಡಿ, ಸಹಾಯಕ ನಿರ್ದೇಶಕ ಸಿ.ಅರ್. ಚಂದ್ರಶೇಖರ್, ಜಿ.ಕೆ. ವೇಣುಗೋಪಾಲ, ಎಚ್.ವಿ. ಚಂದ್ರಶೇಖರ್, ಎಂ. ಸಂಗಣ್ಣ ಸಜ್ಜನ್, ಡಾ. ಎ.ಜಿ. ಶ್ರೀನಿವಾಸ, ಡಾ. ಬಿ.ಕೆ. ದೇಸಾಯಿ, ತಾಪಂ ಸದಸ್ಯ ಈರಣ್ಣ ಹಾಗೂ ನೂರಾರು ರೈತರು ಭಾಗವಹಿಸಿದ್ದರು.