ಹೂವಿನಹಡಗಲಿ: ತಾಲೂಕು ಬಿಜೆಪಿ ರೈತ ಮೋರ್ಚಾ ಹಾಗೂ ಇತರೆ ಘಟಕಗಳ ಕಾರ್ಯಕರ್ತರು ರೈತರಿಗೆ ನಿರಂತರ 8 ತಾಸು ವಿದ್ಯುತ್ ಪೂರೈಕೆ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಾಜಿ ಶಾಸಕ ಬಿ. ಚಂದ್ರನಾಯ್ಕ ಮಾತನಾಡಿ, ಸಿಎಂ ಸಿದ್ದರಾಮಯ್ಯ ವಿಪಕ್ಷದಲ್ಲಿದಾಗ ರೈತರ ಪರ ಗಟ್ಟಿ ಧ್ವನಿ ಇತ್ತು. ಆದರೆ ಇಂದು ಅಧಿಕಾರಕ್ಕೆ ಬಂದ ಕೂಡಲೇ ರೈತರ ವಿರೋಧಿಯಾಗಿದ್ದಾರೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತಾಪಿ ವರ್ಗ ರೋಸಿ ಹೋಗಿದ್ದಾರೆ ಎಂದು ದೂರಿದರು.
ತಮ್ಮ ಅವಧಿಯಲ್ಲಿ ಕೊರೆಸಲಾಗಿರುವ ಕೊಳವೆ ಬಾವಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ, ಇದರಲ್ಲಿಯೂ ಇಲ್ಲಿನ ಸಚಿವರು ಪಕ್ಷ ಭೇದ ಮಾಡುತ್ತಿದ್ದಾರೆ. ರೈತರ ಮೇಲೆ ಇದೆ ರೀತಿ ನಿರ್ಲಕ್ಷ್ಯ ತಾಳಿದರೇ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ರೈತ ಮೋಚಾ ತಾಲೂಕು ಅಧ್ಯಕ್ಷ ಬಸವರೆಡ್ಡಿ ಮಾತನಾಡಿ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಹತಾಶರಾಗಿದ್ದು, ಮೊದಲೆ ಬರದಿಂದ ಕಂಗೆಟ್ಟಿರುವ ರೈತರಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದ ಎಲ್ಲ ಅಣೆಕಟ್ಟಗಳು ತುಂಬಿ ಲಕ್ಷಾಂತರ ಕ್ಯುಸೆಕ್ ನೀರು ಹೊರಗೆ ಹರಿದು ಹೋಗುತ್ತಿದ್ದರೂ ಸಮರ್ಪಕ ವಿದ್ಯುತ್ ಉತ್ಪಾದನೆ ಆಗದಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು. ತಾಲೂಕು ಬಿಜೆಪಿ ಕಾರ್ಯದರ್ಶಿ ಸಂಜೀವರೆಡ್ಡಿ, ಮುಖಂಡ ಪುತ್ರೇಶಿ, ಕೊಟ್ರೇಶ ನಾಯ್ಕ, ಉಚ್ಚೆಂಗೆಪ್ಪ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸಲ್ಮಾ, ಮೀರಾಬಾಯಿ, ಸೋಮಿನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ಎಂ. ಬಸಣ್ಣ ಮಾತನಾಡಿದರು.
ಇದಕ್ಕೂ ಮುನ್ನ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜೆಸ್ಕಾಂ ಎಇಇ ಚಂದ್ರನಾಯ್ಕ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ತೋಟಾನಾಯ್ಕ, ಕೋಡಬಾಳ ಚಂದ್ರಪ್ಪ, ದೂದಾನಾಯ್ಕ, ಅಕ್ಕಿ ಹಾಲೇಶ, ಮಹಿಳಾ ಮೋರ್ಚಾ ಅಧ್ಯಕ್ಷೆ ಎಚ್.ಎಂ. ಪುಷ್ಪಾವತಿ, ಕಾರ್ಯದರ್ಶಿ ಗೀತಾ, ಎಂ. ಶೋಭಾ, ಗೋವಿಂದಪ್ಪ, ಹಾಲೇಶ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.