ಕೂಡ್ಲಿಗಿ: ತಾಲೂಕು ಪಂಚಾಯ್ತಿ ಮಳಿಗೆಗಳ ಹರಾಜು ಪ್ರಕ್ರಿಯೆ ಮಾಡುವಾಗ ನೀವು ಲಂಚದ ಆಮಿಷಕ್ಕೆ ಬಲಿಯಾಗಿದ್ದೀರಿ. ಬಹುತೇಕ ಸದಸ್ಯರ ಗಮನಕ್ಕೆ ತರದೇ ಹರಾಜು ಪ್ರಕ್ರಿಯೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದ್ದು, ಮತ್ತೊಂದು ಬಾರಿ ಎಲ್ಲ ಮಳಿಗೆಗಳನ್ನು ಪುನಃ ಹರಾಜು ಪ್ರಕ್ರಿಯೆ ಮಾಡಬೇಕೆಂದು ತಾಪಂ ಸದಸ್ಯ ರಾಜಣ್ಣ ತಾಲೂಕು ಪಂಚಾಯ್ತಿ ಇಒಗೆ ನೇರ ಆರೋಪ ಮಾಡಿದರು.
ಸೋಮವಾರ ತಾಪಂ ಸಭಾಂಗಣದಲ್ಲಿ ತಾಪಂ ಸಾಮಾನ್ಯ ಸಭೆ ಜರುಗಿತು.
ಕೆಲವೇ ಸದಸ್ಯರ ಗಮನಕ್ಕೆ ತಂದು ತಾಲೂಕು ಪಂಚಾಯ್ತಿಗೆ ಸಂಬಂಧಿಸಿದ 13 ವಾಣಿಜ್ಯ ಮಳಿಗೆಗಳ ಪೈಕಿ ಕೆಳಗಿರುವ 8 ಮಳಿಗೆಗಳನ್ನು ಮಾತ್ರ ಹರಾಜು ಮಾಡಿದ್ದು, ಮೇಲಂತಸ್ತಿನ 5 ಮಳಿಗೆಗಳನ್ನು ಯಾಕೆ ಹರಾಜು ಮಾಡಲಿಲ್ಲ? ಮಾಡುವುದಾಗಿದ್ದರೆ ಎಲ್ಲ ಮಳಿಗೆಗಳನ್ನು ಹರಾಜು ಮಾಡಬೇಕಿತ್ತು ಎಂದು ರಾಜಣ್ಣ ಸಭೆಯಲ್ಲಿ ಇಒ ಮಂಜುನಾಥ ಅವರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹರಾಜು ಮಾಡುವಾಗ 8 ಮಳಿಗೆಗಳಿಗೆ ಮಾತ್ರ ಟೆಂಡರ್ ಕೋರಿದ್ದಾರೆ ಉಳಿದ ಮಳಿಗೆಗಳಿಗೆ ವ್ಯಾಪಾರಸ್ಥರು, ಜನತೆ ಬರದೇ ಇದ್ದರೆ ಅದಕ್ಕೆ ನಾನೇನು ಮಾಡಲಿ ನೀವೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಳಿಗೆಗಳನ್ನು ಬಾಡಿಗೆ ಪಡೆಯಬೇಕಿತ್ತು ಎಂದು ಇಒ ಮಂಜುನಾಥ ರಾಜಣ್ಣನ ಪ್ರಶ್ನೆಗೆ ಉತ್ತರ ನೀಡಿದರು.
ಪ್ರಕೃತಿ ವಿಕೋಪ, ಬರಗಾಲ ಕಾಮಗಾರಿಯಡಿ ಪೂಜಾರಹಳ್ಳಿ ತಾಪಂ ವ್ಯಾಪ್ತಿಗೆ ಬರುವ ತಿಪ್ಪೇಹಳ್ಳಿ ಸಮೀಪ ಕುಡಿಯುವ ನೀರಿನ ಸರಬರಾಜು ಮಾಡುವ ಸಲುವಾಗಿ ಪೈಪ್ಲೈನ್ ಹಾಕಿದ್ದು ಎಷ್ಟು ಸರಿ? ಬೋರ್ವೆಲ್ ಕೊರೆಸಿ ನೀರು ಬಿದ್ದಾಗ ಪೈಪ್ಲೈನ್ ಮಾಡಿಸಬೇಕು. ಆದರೆ, ನೀರೇ ಬಂದಿಲ್ಲ. ಅದಕ್ಕಿಂತ ಮುಂಚೆ ಪೈಪ್ಲೈನ್ ಮಾಡಿದ ಉದ್ದೇಶ ಏನು ಅರಣ್ಯದಲ್ಲಿ ಪೈಪ್ಲೈನ್ ಹೋಗುತ್ತಿದ್ದರೂ ರೈತರ ಜಮೀನುಗಳಲ್ಲಿ ಯಾಕೆ ಪೈಪ್ಲೈನ್ ಮಾಡಿಸಿ ಕಾಮಗಾರಿ ನಿಲ್ಲುವ ಹಾಗೆ ಮಾಡಿದ್ದಿರಿ ನಿಮಗೆ ಊರಿಗೆ ಕುಡಿಯುವ ನೀರನ್ನು ಕೊಡುವ ಕಳಕಳಿಗಿಂತ ಲಾಭದ ಬಗ್ಗೆಯೇ ಯೋಚನೆ ಮಾಡುತ್ತಿರಲ್ಲ? ಈ ರೀತಿ ಕೆಲಸ ಮಾಡಿದ್ದರಿಂದಲೇ ಜನತೆ ಅಧಿಕಾರಿಗಳ ಬಗ್ಗೆ ಬೇಸರ ಬಂದಿದೆ ಎಂದು ಜಿಪಂ ಜೆ.ಇ. ಅಶೋಕ ಅವರನ್ನು ಪೂಜಾರಹಳ್ಳಿ ತಾಪಂ ಸದಸ್ಯ ಮಹೇಶ ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ತಾಪಂ ಉಪಾಧ್ಯಕ್ಷ, ಸದಸ್ಯರು, ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.