ಹಗರಿಬೊಮ್ಮನಹಳ್ಳಿ: ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಸೋಮವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿಭಟನೆ ನಿರತ ಕಾರ್ಯಕರ್ತರನ್ನುದ್ದೇಶಿಸಿ ರೈತ ಮೋರ್ಚಾ ಜಿಲ್ಲಾ ಮುಖಂಡ ಅಂಗಡಿ ಗವಿಸಿದ್ದಪ್ಪ ಮಾತನಾಡಿ, ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ರಾಜ್ಯದಲ್ಲಿ ವಿದ್ಯುತ್ ಸಂಪೂರ್ಣ ಹಾದಿ ತಪ್ಪಿದೆ. ಕಳೆದೊಂದು ವರ್ಷದಲ್ಲಿ ರೈತ ವಿರೋಧಿ ನೀತಿಗಳನ್ನೇ ಅನುಸರಿಸುವ ಮೂಲಕ ವಿದ್ಯುತ್ ಬಳಕೆದಾರರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಅಲ್ಲದೆ ಸಾಲದ ಹೊರೆಯ ಭಾರಕ್ಕೆ ರೈತ ಆತ್ಮಹತ್ಯೆಗೆ ಶರಣಾಗುವುದಷ್ಟೆ ಬಾಕಿ ಇದೆ ಎಂದು ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದಾಗಿ ರೈತ ವರ್ಗ ಕಂಗಾಲಾಗಿದೆ. ಲೋಡ್ ಶೆಡ್ಡಿಂಗ್ ತಪ್ಪಿಸಿ ಕೂಡಲೆ ರೈತರನ್ನು ಕಾಪಾಡುವ ವ್ಯವಸ್ಥೆಯನ್ನು ಮುಖ್ಯಮಂತ್ರಿ, ಇಂಧನ ಸಚಿವರು ಮಾಡಬೇಕೆಂದು ಗವಿಸಿದ್ದಪ್ಪ ಆಗ್ರಹಿಸಿದರು. ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪಕ್ಷದ ಹಿರಿಯ ಮುಖಂಡರಾದ ಚಿಂತ್ರಪಳ್ಳಿ ಗೋಣೆಪ್ಪ, ತಾಪಂ ಮಾಜಿ ಅಧ್ಯಕ್ಷ ಪಿ. ಸೂರ್ಯಬಾಬು, ತಾಪಂ ಸದಸ್ಯ ಸಿಗೇನಳ್ಳಿ ಬಾಳಪ್ಪ, ಗ್ರಾಪಂ ಸದಸ್ಯರಾದ ಕಟಿಗಿ ನಿಂಗಪ್ಪ, ಎಂ. ಬಾಳಪ್ಪ, ಮೌಲಾಸಾಬ್, ಸೆರೆಗಾರ ಹುಚ್ಚಪ್ಪ, ಕನಕಪ್ಪ, ಎಸ್ಸಿ ಘಟಕ ಅಧ್ಯಕ್ಷ ಎ.ಕೆ. ರಾಮಣ್ಣ ಕುರುದಗಡ್ಡಿ, ಎಸ್ಟಿ ಘಟಕದ ಬ್ಯಾಟಿ ಮಲ್ಲೇಶ್, ಎಚ್. ಕೊಟ್ರೇಶ್, ಅಂಬಣ್ಣ, ಎಂ. ಖಲೀಲ್ ಸಾಬ್, ರೈತ ಮೋರ್ಚಾದ ಬಾವಿ ರಾಮನಾಯ್ಕ, ಎಚ್. ದೇವೆಂದ್ರಪ್ಪ, ಸಕ್ರಪ್ಪ, ಬಿ. ಬಸವರಾಜ, ಎ. ಹಮ್ಮಿದ್, ಮಾಬು, ಸಿ. ಈಶಪ್ಪ, ಕೆ.ಬಿ. ರಾಜ್ ಇತರರು ಪ್ರತಿಭಟನೆಯಲ್ಲಿದ್ದರು.