ಹೊಸಪೇಟೆ / ಕುರುಗೋಡು: ಹೊಸಪೇಟೆಯ ಪತ್ರಕರ್ತ ಬಸಾಪುರ ಬಸವರಾಜ್ ಅವರಿಗೆ ನಗರಸಭೆ ಸದಸ್ಯ ಟಿ. ಚಿದಾನಂದ್ ಅವರು ಮೊಬೈಲ್ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಮಂಗಳವಾರ ನಡೆದಿದೆ. ವರದಿಯೊಂದಕ್ಕೆ ಸಂಬಂಧಿಸಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಬಸವರಾಜ್ ದೂರು ದಾಖಲಿಸಿದ್ದಾರೆ. ಹೊಸಪೇಟೆ ಹಾಗೂ ಮರಿಯಮ್ಮನಹಳ್ಳಿ ಹೋಬಳಿ ದಿನಮಾಧ್ಯಮ ಪತ್ರಕರ್ತರ ಸಂಘ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಸಂಘದ ಪದಾಧಿಕಾರಿಗಳು ಬುಧವಾರ ಮುಖ್ಯಮಂತ್ರಿ, ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವರಿಗೆ ತಹಸೀಲ್ದಾರ್ ಮೂಲಕ ಬುಧವಾರ ಮನವಿ ಸಲ್ಲಿಸಿದ್ದಾರೆ. ಮರಿಯಮ್ಮನಹಳ್ಳಿಯಲ್ಲೂ ಕಂದಾಯ ನಿರೀಕ್ಷಕ ಕೆ. ನಾಗರಾಜ್‌ಗೆ ಮನವಿ ನೀಡಿದರು. ಸಂಘದ ಅಧ್ಯಕ್ಷ ಎಚ್.ಎಸ್. ಶ್ರೀಹರಪ್ರಸಾದ್, ಉಪಾಧ್ಯಕ್ಷ ಸಿ. ಪ್ರಕಾಶ್, ಕಾರ್ಯದರ್ಶಿ ಕಿಚಿಡಿ ಕೊಟ್ರೇಶ್, ಕೋಶಾಧ್ಯಕ್ಷ ಪೂಜಾರ್ ರಾಮಚಂದ್ರ, ನಿರ್ದೇಶಕರಾದ ಜಿ.ವಿ. ಸುಬ್ಬರಾವ್, ಸಿ.ಕೆ. ನಾಗರಾಜ್, ಸೋಮೇಶ್ ಉಪ್ಪಾರ್, ಯು. ಭೀಮರಾಜ, ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಅಧ್ಯಕ್ಷ ಈ. ರಮೇಶ್, ಗೌರವಾಧ್ಯಕ್ಷ ಡಿ. ಭೀಮಪ್ಪ ಇದ್ದರು.
ಕುರುಗೋಡು ವರದಿ: ಪತ್ರಕರ್ತ ಬಸವರಾಜ್ ಅವರಿಗೆ ಬೆದರಿಕೆ ಒಡ್ಡಿರುವುದನ್ನು ಖಂಡಿಸಿ ಕುರಗೋಡು ವಿಶೇಷ ತಹಸೀಲ್ದಾರ್ ಜಿ. ಸುರೇಶ್ ಬಾಬು ಅವರ ಮೂಲಕ ಪತ್ರಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ. ಪತ್ರಕರ್ತರಾದ ಪಿ.ಆರ್. ವೆಂಕಟೇಶ್, ಎ. ವಾಗೀಶ್, ಕೆ. ಭೀಮಣ್ಣ, ಎಂ. ಪಂಪಾಪತಿ ಗೌಡ, ಕೆ. ವೀರಭದ್ರಗೌಡ, ಸಿರಿಗೇರಿ ಕುಮಾರ, ಎಮ್ಮಿಗನೂರು ಜಿ.ಎಂ.ಬಸಯ್ಯ, ಎನ್. ಮಲ್ಲಿಕಾರ್ಜುನಗೌಡ, ವಿನಯ್ ಕುಮಾರ್ ಇದ್ದರು. ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಬಳ್ಳಾರಿ ಮೀಡಿಯಾ ಕ್ಲಬ್ ಅಧ್ಯಕ್ಷರಾಗಿ ಕಿನ್ನೂರೇಶ್ವರ
ಬಳ್ಳಾರಿ: ಬಳ್ಳಾರಿ ಮೀಡಿಯಾ ಕ್ಲಬ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೂರದರ್ಶನ ವರದಿಗಾರ ಎಸ್. ಕಿನ್ನೂರೇಶ್ವರ ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಬುಧವಾರ ಮೀಡಿಯಾ ಕ್ಲಬ್‌ನ ಅಧ್ಯಕ್ಷ ಕಾಡ್ಲೂರ್ ಮಧುಸೂದನ್, ಕಾರ್ಯದರ್ಶಿ ಕೆ.ಎಂ. ಮಂಜುನಾಥ್ ನೇತೃತ್ವದಲ್ಲಿ ನಡೆದ ಮೀಡಿಯಾ ಕ್ಲಬ್‌ನ ಸಭೆಯಲ್ಲಿ ಅವರ ಅವಧಿ ಪೂರ್ಣಗೊಂಡಿದ್ದರಿಂದ ಹಿರಿಯ ವರದಿಗಾರ ಅಹಿರಾಜ್ ಹಂಗಾಮಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಅತಿ ಹೆಚ್ಚು ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದ ಕಿನ್ನೂರೇಶ್ವರ ಅವರನ್ನು ಮೀಡಿಯಾ ಕ್ಲಬ್‌ನ ಎಲ್ಲ ಸದಸ್ಯರು ಅಭಿನಂದಿಸಿದರು. ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಇದ್ದರು.