ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 19
ವಿಧಾನಸಭೆ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಚುರುಕಾಗಿದೆ. ಬಳ್ಳಾರಿ ಸಂಸದ ಶ್ರೀರಾಮುಲು ತವರು ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಹವಣಿಸುತ್ತಿದೆ.
ಕಾಂಗ್ರೆಸ್ ಮುಖಂಡ ಉಗ್ರಪ್ಪ ಅವರನ್ನು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಸುವಂತೆ ಜಿಲ್ಲೆಯ ಕೆಲ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್ ಟಿಕೆಟ್ ಪಡೆಯುವ ಜಿಲ್ಲೆಯ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಡಬೇಕಾದ ಅನಿವಾರ್ಯ ಕಾಂಗ್ರೆಸ್ಗೆ ಇದೆ. ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಿಂತೆ ಮತ್ತೊಮ್ಮೆ ಶ್ರೀರಾಮುಲು ಪ್ರತಿಷ್ಠೆ ಹಾಗೂ ಕಾಂಗ್ರೆಸ್ ನಡುವೆ ಸ್ಪರ್ಧೆ ನಡೆಯಲಿದೆ.
ಈಗಾಗಲೇ ಕಾಂಗ್ರೆಸ್ಆಕಾಂಕ್ಷಿಗಳು ತಮ್ಮ ನೆಚ್ಚಿನ ನಾಯಕರನ್ನು ಮುಂದಿಟ್ಟುಕೊಂಡು ಟಿಕೆಟ್ಗಾಗಿ ಲಾಬಿ ನಡೆಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರಲ್ಲಿ ಮೊದಲೇ ವೈಮನಸ್ಸು ಇರುವುದರಿಂದ ಪ್ರತಿಯೊಬ್ಬ ಮುಖಂಡರೂ ಒಬ್ಬೊಬ್ಬ ಆಕಾಂಕ್ಷಿಗಳ ಹಿಂದೆ ನಿಂತಿದ್ದಾರೆ. ಹೀಗಾಗಿ ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ಗೊಂದಲ ಕೈ ಪಾಳಯದಲ್ಲಿ ಮನೆ ಮಾಡಿದೆ.
ಕಾಂಗ್ರೆಸ್ ಪಕ್ಷದ ದೊಡ್ಡ ಪಟ್ಟಿ: ಎನ್.ವೈ. ಗೋಪಾಲಕೃಷ್ಣ, ರಾಂಪ್ರಸಾದ್, ವಿ.ಕೆ. ಬಸಪ್ಪ, ವಿ. ಜನಾರ್ದನ, ಎನ್.ವೈ. ಸ್ವಾಮಿ, ಆಸುಂಡಿ ಹೊನ್ನೂರಪ್ಪ, ಯರ್ರಗುಡಿ ಗೋಪಾಲ, ಕಮಲಾಮರಿಸ್ವಾಮಿ, ಪಿ. ಗಾದಿಲಿಂಗಪ್ಪ, ಗೂಳೆಪ್ಪ, ವಿ.ಎನ್. ಗಿರಿಮಲ್ಲಪ್ಪ, ಮೋಕ ತಿಮ್ಮಪ್ಪ ಹೀಗೆ 19 ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಇದೆ. ಅಲ್ಲದೆ ಹೊರಗಿನಿಂದ ಶಶಿಕುಮಾರ್, ಉಗ್ರಪ್ಪ ಅವರ ಹೆಸರು ಕೇಳಿಬರುತ್ತಿವೆ.
ಪ್ರತಿಯೊಬ್ಬ ಆಕಾಂಕ್ಷಿ ತಮ್ಮ ಮುಖಂಡರ ಪ್ರಭಾವ ಬಳಸಿ ಟಿಕೆಟ್ ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ಪ್ರತಿಯೊಬ್ಬ ಆಕಾಂಕ್ಷಿಯೂ ತಮ್ಮ ಹಿಂಬಾಲಕರ ಸಂಖ್ಯಾಬಲ ಪಕ್ಷದ ಮುಖಂಡರಿಗೆ ತೋರಿಸುವ ಮೂಲಕ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಪ್ರಬಲ ಪೈಪೋಟಿ: ಕ್ಷೇತ್ರ ಪುನರ್ವಿಂಗಡಣೆಯಿಂದಲೂ ಪರಿಶಿಷ್ಟ ಪಂಗಡಕ್ಕೆ ಸೀಮಿತವಾಗಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿ. ಶ್ರೀರಾಮುಲು ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಇದು ಶ್ರೀರಾಮುಲು ಅವರ ತವರು ಕ್ಷೇತ್ರ ಆಗಿರುವುದರಿಂದ ಇಲ್ಲಿ ಬಿಜೆಪಿಯಿಂದ ಯಾರೇ ನಿಂತರೂ ಅದು ಶ್ರೀರಾಮುಲು ಪ್ರತಿನಿಧಿಯಿದ್ದಂತೆ. ಕಾರಣ ಈ ಕ್ಷೇತ್ರವನ್ನು ಶ್ರೀರಾಮುಲು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಶ್ರೀರಾಮುಲು ಅವರಿಗೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಮುಂದಾಗುತ್ತಿದೆ. ಈಗಾಗಲೇ ಹಲವು ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲುತ್ತಾ ಬಂದಿದ್ದು, ಈ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಈ ಕುರಿತಾಗಿ ಎಂಎಲ್ಸಿ ಉಗ್ರಪ್ಪ ಅವರನ್ನು ಸಂಪರ್ಕಿಸಿದಾಗ, ನಾನು ಎಂಎಲ್ಸಿಯಾಗಿದ್ದು 6 ವರ್ಷ ಅಧಿಕಾರವಿದೆ. ಆದರೆ ಪಕ್ಷದ ನಿರ್ಧಾರಕ್ಕೆ ನಾನು ತಲೆ ಬಾಗುತ್ತೇನೆ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ.